ಮತ್ಸ್ಯ ಬೇಟೆಗೆ ಭರದ ಸಿದ್ಧತೆ

fishing new
Published on

ಭರತ್ ಶೆಟ್ಟಿಗಾರ್ ಮಂಗಳೂರು

ಆಳ ಸಮುದ್ರದ ಮೀನುಗಾರಿಕೆಗೆ ಈ ಬಾರಿ ಹದಿನೈದು ದಿನ ತಡವಾಗಿ ರಜೆ ಘೋಷಣೆಯಾಗಿದ್ದು, ಇನ್ನೆರಡು ತಿಂಗಳ ಕಾಲ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ. ಸಾಂಪ್ರದಾಯಿಕವಾಗಿ ನಡೆಸುವ ಈ ಮೀನುಗಾರಿಕೆ ದ.ಕ ಜಿಲ್ಲೆಯಲ್ಲಿ ಇನ್ನಷ್ಟೇ ಚುರುಕು ಪಡೆಯಬೇಕಿದೆ. ಈಗಾಗಲೇ ಸಣ್ಣ ಪ್ರಮಾಣದಲ್ಲಿ ಮೀನುಗಾರಿಕೆ ಆರಂಭವಾಗಿದೆ. ದೊಡ್ಡ ಮಟ್ಟದಲ್ಲಿ ಇನ್ನಷ್ಟೇ ಶುರುವಾಗಬೇಕಿದೆ. ಜೋರಾಗಿ ಮಳೆ, ಸಮುದ್ರದಲ್ಲಿ ಗಾಳಿ ಎದ್ದು ತೀರ ಪ್ರದೇಶದಲ್ಲಿ ನೀರು ರಾಡಿ(ತೂಫಾನ್) ಎದ್ದರೆ ನಾಡದೋಣಿ ಮೀನುಗಾರರಿಗೆ ಹೆಚ್ಚಿನ ಮೀನು ದೊರೆಯುತ್ತದೆ. ಈ ರೀತಿ ರಾಡಿ ಎದ್ದಾಗ ನೀರಿನ ಅಡಿಭಾಗದಲ್ಲಿರುವ ಮಣ್ಣಿನ ಗಟ್ಟಿಗಳು ಮೇಲಕ್ಕೆ ಬರುತ್ತವೆ(ಮೀನುಗಾರರ ಭಾಷೆಯಲ್ಲಿ ಇವುಗಳಿಗೆ ‘ಬರಂ’ ಎನ್ನುತ್ತಾರೆ) ಅವುಗಳಲ್ಲಿರುವ ಹುಳುಗಳನ್ನು ತಿನ್ನಲು ಮೀನುಗಳು ದಡದತ್ತ ಬರುತ್ತವೆ. ಇವುಗಳನ್ನು ಬಲೆ ಬೀಸಿ ಹಿಡಿಯುತ್ತೇವೆ ಎನ್ನುತ್ತಾರೆ ನಾಡದೋಣಿ ಮೀನುಗಾರ ಸುಕೇಶ್ ಕೋಟ್ಯಾನ್. ಬಲೆ ಮುಹೂರ್ತ: ನಾಡದೋಣಿ ಮೀನುಗಾರಿಕೆ ಪೂರ್ವತಯಾರಿಯಾಗಿ ಶುಕ್ರವಾರ ಸುರತ್ಕಲ್ ವ್ಯಾಪ್ತಿಯ ಮೀನುಗಾರರು ‘ಬಲೆ ಮುಹೂರ್ತ’ ನೆರವೇರಿಸಿದ್ದಾರೆ. ಬೇರೆ ಬೇರೆ ಕಣ್ಣುಗಳಿರುವ ಬಲೆ ಸಿದಟಛಿಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಮಂಗಳೂರಿನ ಬೈಕಂಪಾಡಿ, ಕೋಡಿಕಲ್, ಹೊಸಬೆಟ್ಟು, ಕೂಳೂರು, ಕುಳಾಯಿ, ಉಳ್ಳಾಲ ಪ್ರದೇಶದ ಮೀನುಗಾರರು ಈ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಗೂ ನಿರೀಕ್ಷಿತ ಪ್ರಮಾಣದಲ್ಲಿ ಮೀನು ದೊರೆಯುತ್ತಿಲ್ಲ. ಉಡುಪಿಯಲ್ಲಿ ಈಗಾಗಲೇ ಸಮುದ್ರ ಪೂಜೆ ನಡೆಸಿ ನಾಡದೋಣಿ ಮೀನುಗಾರಿಕೆ ಆರಂಭಿಸಲಾಗಿದೆ

ಬಂಗುಡೆ ಬೇಟೆಗೆ ಸಿದ್ಧತೆ ನಾಡದೋಣಿ ಮೀನುಗಾರರು ವಿವಿಧ ರೀತಿಯ ಬಲೆಗಳನ್ನು ಮೀನು ಹಿಡಿಯಲು ಉಪಯೋಗಿಸುತ್ತಾರೆ. ಮುಖ್ಯವಾಗಿ ಪಟ್ಟೆ ಬಲೆಯನ್ನು ಬಂಗುಡೆ ಮೀನಿಗೆ, ರಾಣಿ ಬಲೆಯನ್ನು ಸಿಗಡಿ ಹಿಡಿಯಲು ಬಳಸುತ್ತಾರೆ. ನೀರು ರಾಡಿ ಎದ್ದಾಗ ಮೊದಲ ತೀರದತ್ತ ಬರುವುದು ಬಂಗುಡೆ ಮೀನು. ಅದನ್ನು ಹಿಡಿಯುವುದೇ ಮೀನುಗಾರರ ಮೊದಲ ಆದ್ಯತೆಯಾಗಿರುತ್ತದೆ. ಬಂಗುಡೆಯ ಜತೆಗೆ ಇತರ ಮೀನುಗಳೂ ಬಲೆಗೆ ಬೀಳುತ್ತವೆ. ‘ಸ್ವಾಡಿ’ ಮೀನು ಕೂಡಾ ದೊರೆಯುತ್ತದೆ. ಕೆಲವೊಮ್ಮೆ ಏಡಿಯೂ ಬೀಳುತ್ತದೆ.

ನಾಡದೋಣಿ ಮೀನುಗಾರರಿಗೆ ಸಮುದ್ರದಲ್ಲಿ ಪಶ್ಚಿಮಕ್ಕೆ 4-5 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಮೀನುಗಾರಿಕೆ ನಡೆಸಲು ಅವಕಾಶವಿದೆ. ಇಲ್ಲಿ 12ಅಶ್ವಶಕ್ತಿಯ ಬೋಟ್‌ಗಳು ಮಾತ್ರ ನಡೆಸುತ್ತವೆ. ಕಡಲು ಕದಡಿ ರಾಡಿ ಎದ್ದರೆ ಮೀನು ಹೆಚ್ಚು ಸಿಗುವ ಸಾಧ್ಯತೆಯಿರುತ್ತದೆ. ಶಂಕರ್ ಬಂಗೇರ, ನಾಡದೋಣಿ ಮೀನುಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net