ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ, ಮೀನುಗಾರರ ರಕ್ಷಣೆ

ಮುಳುಗಡೆಯಾದ ಭಾಗೀರಥಿ ಹೆಸರಿನ ಬೋಟ್.
ಮುಳುಗಡೆಯಾದ ಭಾಗೀರಥಿ ಹೆಸರಿನ ಬೋಟ್.
Published on
ಮಂಗಳೂರು: ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಭಾಗೀರಥಿ ಹೆಸರಿನ ಬೋಟ್ ಮಂಗಳೂರಿನಿಂದ 5 ನಾಟಿಕಲ್ ಮೈಲು ದೂರದಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಬ್ರಹ್ಮಾವರ ಮಾಬುಕಳ ಜಯ ಸಾಲ್ಯಾನ್ ಎಂಬವರಿಗೆ ಸೇರಿದ ಬೋಟ್ ಮೇ 24ರಂದು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿತ್ತು. ಮೇ 26ರಂದು ಬೆಳಗ್ಗೆ ಮಂಗಳೂರಿನಿಂದ ಸುಮಾರು 8-10 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಬೋಟಿನ ಗೇರ್ ಬಾಕ್ಸ್ ನಲ್ಲಿ ಸಮಸ್ಯೆ ಉಂಟಾಗಿದೆ. ಬೆಳಗ್ಗೆ 9.30ರ ವೇಳೆಗೆ ಮಂಗಳೂರು ಹಳೇ ಬಂದರಿಗೆ ರಿಪೇರಿಗೆ ಬಂದಿದೆ. ರಾತ್ರಿ 9.30ರ ಹೊತ್ತಿಗೆ ಅಳಿವೆ ಬಾಗಿಲಿನ ಮೂಲಕ ನಿರ್ಗಮಿಸಿ, ಸುಮಾರು 5 ನಾಟಿಕಲ್ ಮೈಲು ದೂರದಲ್ಲಿ ಸಾಗಿ ಮೀನುಗಾರಿಕೆ ಮಾಡುತ್ತಿದ್ದಾಗ, ಸಮುದ್ರದ ಅಡಿಯಲ್ಲಿ ಯಾವುದೋ ಮುಳುಗಡೆಯಾಗಿದ್ದ ಬೋಟಿನ ಭಾಗ ತಾಗಿದ್ದು, ನೀರು ತುಂಬಿ ಬೋಟ್ ಮುಳುಗಲು ಆರಂಭವಾಗಿದೆ.
ರಾತ್ರಿ ಸುಮಾರು 12.30ರ ವೇಳೆಗೆ ಬೋಟ್ ಸಂಪೂರ್ಣ ಮುಳುಗಡೆ ಹಂತಕ್ಕೆ ತಲುಪಿದಾಗ ಹತ್ತಿರದಲ್ಲಿದ್ದ ನಾಲ್ಕು ಬೋಟಿನವರು ಸಹಾಯಕ್ಕೆ ಬಂದು ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಜತೆಗೆ ಮುಳುಗಡೆಯಾಗುತ್ತಿದ್ದ ಬೋಟನ್ನು ಹಗ್ಗ ಕಟ್ಟಿ ಇತರ ಎರಡು ಬೋಟ್‌ಗಳ ಸಹಾಯದಿಂದ ಎಳೆದು ತಂದು ಹಳೇ ಬಂದರು ದಕ್ಕೆಯ ಹೊಯ್ಗೆ ಬಜಾರ್ ನಲ್ಲಿ ನಿಲ್ಲಿಸಿದ್ದಾರೆ.
ಎರಡು ದಿನಗಳ ಕಾಲ ಮೀನುಗಾರಿಕೆ ಮಾಡಿ ಬೋಟ್ ನಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ಮೀನುಗಳು, ಸುಮಾರು 2,500 ಲೀ. ಡೀಸೆಲ್, ನೇವಿಗೇಷನ್ ಉಪಕರಣಗಳಾದ ಜಿಪಿಎಸ್, ಎಐಎಸ್, ವಯರ್ ಲೆಸ್ ಸೆಟ್, ಫಿಶ್ ಫೈಂಡರ್, ಮೀನುಗಾರಿಕೆ ಬಲೆಗಳು ನಾಶವಾಗಿವೆ. ಬೋಟ್ ನ ಇಂಜಿನ್ ಒಳಗೆ ನೀರು ಹೋಗಿ ಬೋಟ್ ರಿಪೇರಿ ಮಾಡಲಾಗದ ಸ್ಥಿತಿ ಉಂಟಾಗಿದೆ. ಸುಮಾರು 25 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಬೋಟ್ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net