

ಪ್ರಮುಖ ಮುಖ್ಯಾಂಶಗಳು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಟೆರಿಟೋರಿಯಲ್ ವಾಟರ್ಸ್ (12 ನಾಟಿಕಲ್ ಮೈಲ್ಸ್‌ವರೆಗಿನ) ಭಾಗದಲ್ಲಿ ಯಾವುದೇ ಬಲೆ/ಸಾಧನಗಳನ್ನು ಉಪಯೋಗಿಸಿ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಮೋಟಾರೀಕೃತ ದೋಣಿ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂ. 1ರಿಂದ ಜು. 31ರ ವರೆಗೆ ಒಟ್ಟು 61 ದಿನಗಳ ನಿಷೇಧವನ್ನು ಹೇರಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಿಷೇಧದ ಅವಧಿಯಲ್ಲಿ ಜಿಲ್ಲೆಯಲ್ಲಿ ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿಯೇ 10 ಅಶ್ವಶಕ್ತಿವರೆಗಿನ ಸಾಮರ್ಥ್ಯದ ಮೋಟಾರೀಕೃತ ದೋಣಿ ಮತ್ತು ಸಾಂಪ್ರದಾಯಿಕ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ. ಮೀನುಗಾರಿಕೆ ನಿಷೇಧಿಸಿದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆಯಡಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುತ್ತಾರೆ. ಒಂದು ವರ್ಷದ ಅವಧಿಗೆ ರಾಜ್ಯ ಮಾರಾಟ ಕರ ರಹಿತ ಡೀಸೆಲ್ ಪಡೆಯಲು ಅನರ್ಹರಾಗುತ್ತಾರೆ. ಈ ಆದೇಶವನ್ನು ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರು ಪಾಲಿಸಬೇಕು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.