ಸೀಮೆ ಎಣ್ಣೆ ದರ ಹೆಚ್ಚಳ ನಾಡದೋಣಿಗಳಿಗೆ ಸಮಸ್ಯೆ

Published on

ಕಾರವಾರ: ಸೀಮೆ ಎಣ್ಣೆ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಔಟ್ ಬೋರ್ಡ್ ಇಂಜಿನ್‌ಗಳನ್ನು ಹೊಂದಿರುವ ಮೋಟರೀಕೃತ ನಾಡ ದೋಣಿಗಳಿಗೆ ಭಾರವಾಗುತ್ತಿದೆ.

ನಾಡ ದೋಣಿ ಮೀನುಗಾರರಿಗೆ ನೀಡುತ್ತಿದ್ದ ಸೀಮೆ ಎಣ್ಣೆ ಬೆಲೆ ಮೊದಲು 58.7 ರೂ. ಇತ್ತು ಈಗ 62 ರೂ.ಗೆ ಏರಿಕೆಯಾಗಿದೆ. ತೈಲ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಪ್ರತಿ ದೋಣಿಗೆ ದಿನಕ್ಕೆ 3 ರಿಂದ 4 ಸಾವಿರ ರೂ. ಸೀಮೆ ಎಣ್ಣೆಗೇ ಖರ್ಚಾಗುತ್ತಿದೆ. ಕೆಲವು ಬಾರಿ ಅಷ್ಟು ದುಡಿಮೆಗೂ ಆಗದ ಕಾರಣ ನಷ್ಟವಾಗುತ್ತಿದೆ ಎಂಬುದು ಮೀನುಗಾರರ ಗೋಳು. ಹೆಚ್ಚಿನ ಬಂಡವಾಳ ಹೊಂದಲ ಸಾಧ್ಯವಾಗದ ಸಣ್ಣ ಮೀನುಗಾರರಿಗೆ ಇದು ದೊಡ್ಡ ಸವಾಲಾಗುತ್ತಿದೆ.

ಸರ್ಕಾರ ನೋಂದಾಯಿತ ಔಟ್ ಬೋರ್ಡ್ ಇಂಜಿನ್ ಹೊಂದಿದ ಪ್ರತಿ ನಾಡ ದೋಣಿಗೆ ಮಾಸಿಕ ಗರಿಷ್ಠ 200 ಲೀಟರ್‌ವರೆಗೆ ಸೀಮೆ ಎಣ್ಣೆಯನ್ನು ನೀಡುತ್ತಿತ್ತು. ಆಹಾರ ಇಲಾಖೆಯ ಮೂಲಕ ಪ್ರತಿ ಲೀಟರ್‌ಗೆ 35 ರೂ.ನಂತೆ ಎಣ್ಣೆ ನೀಡಲಾಗುತ್ತಿತ್ತು. ಆದರೆ, ಮೂರು ವರ್ಷಗಳ ಹಿಂದೆ ಸೀಮೆ ಎಣ್ಣೆ ವಿತರಣೆಯೇ ಕಡಿಮೆಯಾಯಿತು. ಇದರಿಂದ ಸಬ್ಸಿಡಿ ಬೆಲೆಯ ಸೀಮೆ ಎಣ್ಣೆ ವಿತರಣೆ ಸ್ಥಗಿತವಾಗಿತ್ತು. ಮೀನುಗಾರರಿಗೆ ತೀವ್ರ ಸಂಕಷ್ಟ ಎದುರಾಗಿತ್ತು.

ಈಗ ಎರಡು ವರ್ಷಗಳಿಂದ ಮೀನುಗಾರಿಕೆ ಸಚಿವರ ಸೂಚನೆಯಂತೆ ಕರ್ನಾಟಕ ಮೀನುಗಾರಿಕೆ ಫೆಡರೇಶನ್ ಮೂಲಕ 19 ಮೀನುಗಾರಿಕೆ ಸಹಕಾರಿ ಸಂಘಗಳ ಮೂಲಕ ಸಬ್ಸಿಡಿ ಸೀಮೆ ಎಣ್ಣೆ ನೀಡಲಾಗುತ್ತಿದೆ. ಇದು ಮೀನುಗಾರರಿಗೆ ಅನುಕೂಲವಾಗಿದ್ದರೂ ಅದರ ಬೆಲೆ ನಿಧಾನಕ್ಕೆ ಏರುತ್ತ ಇರುವುದು ಸವಾಲಾಗಿದೆ. ಸರ್ಕಾರ ಮುಂದೆ ನಿಂತು ಬೆಲೆಯನ್ನು ಕೊಂಚ ಕಡಿಮೆ ಮಾಡುವಂತೆ ನಾಡ ದೋಣಿ ಮೀನುಗಾರರು ಮನವಿ ಮಾಡಿದ್ದಾರೆ.

ಪೆಟ್ರೊಲ್ ಇಂಜಿನ್ ಪರಿವರ್ತನೆ:

ಮೀನುಗಾರಿಕೆ ಇಲಾಖೆಯ ಮಾಹಿತಿಯಂತೆ ಕಾರವಾರ -370, ಅಂಕೋಲಾ-26, ಕುಮಟಾ-630, ಹೊನ್ನಾವರ-260 ಭಟ್ಕಳ-655 ಸೇರಿ ಒಟ್ಟು 1941 ಮೋಟರೀಕೃತ ನಾಡ ದೋಣಿಗಳಿವೆ. ಈಗಾಗಲೇ ಹಲವು ಮೀನುಗಾರರು ಸ್ವ ಆಸಕ್ತಿಯಿಂದ ಪೆಟ್ರೊಲ್ ಇಂಜಿನ್‌ಗೆ ಪರಿವರ್ತನೆ ಮಾಡಿಕೊಂಡಿದ್ದಾರೆ. ಪೆಟ್ರೊಲ್ ಬೆಲೆ ಹೆಚ್ಚಿದ್ದರೂ ಮೈಲೇಜ್ ಹೆಚ್ಚು ನೀಡುತ್ತದೆ ಎಂಬುದು ಕೆಲವು ಮೀನುಗಾರರ ಅಭಿಪ್ರಾಯ.

ಇದೇ ಅವಕಾಶ

ಆಗಸ್ಟ್ನಿಂದ ಮೇ ತಿಂಗಳವರೆಗೆ ಸಮುದ್ರದಲ್ಲಿ ಬೃಹತ್ ಇಂಜಿನ್‌ಗಳನ್ನು ಹೊಂದಿದ ಟ್ರಾಲರ್, ಪರ್ಸೀನ್ ದೋಣಿಗಳಿಂದ ಮೀನುಗಾರಿಕೆ ನಡೆಯುತ್ತದೆ. ಇದರಿಂದ ದಡದಿಂದ ಅಲ್ಪ ದೂರದವರೆಗೆ ಮಾತ್ರ ಸಾಗಬಲ್ಲ ನಾಡ ದೋಣಿಗಳ ಮೀನುಗಾರರಿಗೆ ಸಿಗುವ ಮೀನಿನ ಪ್ರಮಾಣ ಕಡಿಮೆ. ಇನ್ನು ಸಿಕ್ಕ ಮೀನಿಗೂ ಎಲ್ಲ ಬಾರಿ ಬೆಲೆ ಇದ್ದುಬಿಡುತ್ತದೆ ಎಂಬುದಿಲ್ಲ. ಜೂನ್‌ನಿಂದ ಜುಲೈ 31 ರವರೆಗೆ ಪಶ್ಚಿಮ ಕರಾವಳಿಯಲ್ಲಿ 10 ಎಚ್‌ಪಿಗಿಂತ ಹೆಚ್ಚು ಸಾಮರ್ಥ್ಯದ ಇಂಜಿನ್ ಬಳಸಿ ಮೀನುಗಾರಿಕೆ ನಡೆಸುವುದನ್ನು ನಿಷೇಽಸಲಾಗುತ್ತದೆ. ಇದರಿಂದ ಈ ಸಮಯದಲ್ಲಿ ನಾಡ ದೋಣಿ ಮೀನುಗಾರರ ದುಡಿಮೆಗೆ ಹೆಚ್ಚು ಅವಕಾಶವಿದೆ. ಮೀನಿಗೂ ಬೆಲೆ ಸಿಗುತ್ತದೆ. ಆದರೆ, ಹವಾಮಾನ ವೈಪರೀತ್ಯ, ಇಂಧನ ಬೆಲೆ ಏರಿಕೆ ಮುಂತಾದ ಹಲವು ಅಡಚಣೆಗಳಿಂದ ನಮ್ಮ ದುಡಿಮೆಗೆ ಕುತ್ತು ಬರುತ್ತಿದೆ ಎನ್ನುತ್ತಾರೆ. ಮೀನುಗಾರ ಗಣಪತಿ ಹರಿಕಂತ್ರ.

ಸೀಮೆ ಎಣ್ಣೆ ಮುಕ್ತ ಮಾರುಕಟ್ಟೆಯಲ್ಲಿ ಸಿಗುವುದೇ ಕಷ್ಟವಾಗಿದೆ. ಒಮ್ಮೆ ಸಿಕ್ಕಿದರೂ ಇನ್ನೂ ಬೆಲೆ ಹೆಚ್ಚಿದೆ. ಹಾಗಾಗಿ ಕೆಎಫ್‌ಡಿಸಿ ಮೂಲಕ ಖರೀದಿ ಮಾಡಿ ವಿತರಣೆ ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ 1.76 ಲಕ್ಷ ಲೀಟರ್, ಮೇ ತಿಂಗಳಲ್ಲಿ 2.09 ಲಕ್ಷ ಲೀಟರ್ ಸೀಮೆ ಎಣ್ಣೆಯನ್ನು ವಿತರಣೆ ಮಾಡಲಾಗಿದೆ. ಸೀಮೆ ಎಣ್ಣೆ ಇಂಜಿನ್‌ನಿAದ ಪೆಟ್ರೋಲ್ ಇಂಜಿನ್‌ಗೆ ಬದಲಾವಣೆ ಮಾಡುವುದಿದ್ದರೂ ಅದಕ್ಕೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತಿದೆ.

ಬಬಿನ್ ಭೋಪಣ್ಣ

ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net