

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುಕೋಟಿ ವೆಚ್ಚದ ಬೃಹತ್ ಬಂದರು ಕಾಮಗಾರಿಗೆ ಸ್ಥಳೀಯ ಮೀನುಗಾರರಿಂದ ವಿರೋಧ ವ್ಯಕ್ತವಾಗಿದೆ.
ಬುಧವಾರ ಸಂಜೆ ಕೇಣಿ ಕಡಲ ತೀರದಲ್ಲಿ 500ಕ್ಕೂ ಅಧಿಕ ಮೀನುಗಾರರು ವಾಣಿಜ್ಯ ಬಂದರು ಬೇಡವೇ ಬೇಡ ಎಂದು ಸರ್ಕಾರ ಮತ್ತು ಜೆಎಸ್‌ಡಬ್ಲುೃ ಕಂಪನಿಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಹರಿಕಂತ್ರ ಮಹಾಜನ ಸಂಘದ ತಾಲೂಕು ಅಧ್ಯಕ್ಷ ಹುವಾ ಖಂಡೇಕರ ಮಾತನಾಡಿ, ತಲಾತಲಾಂತರದಿಂದ ಕೇಣಿಯಲ್ಲಿ ಮೀನುಗಾರಿಕೆ ನಂಬಿ ಅನೇಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ವಾಣಿಜ್ಯ ಬಂದರು ನಿರ್ಮಾಣದಿಂದ ಕುಟುಂಬಗಳು ಬೀದಿ ಪಾಲಾಗಲಿವೆ. ಇಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಮಾಹಿತಿಯನ್ನೂ ಪ್ರಕಟಿಸದೆ ಏಕಾಏಕಿ ಜಿಪಿಎಸ್ ಸರ್ವೇ ಮುಂತಾದ ಕೆಲಸಗಳನ್ನು ಪ್ರಾರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾವಿಕೇರಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಚಂದ್ರಕಾಂತ ಹರಿಕಂತ್ರ ಮಾತನಾಡಿ, ಸರ್ಕಾರ ಬೇಕಿದ್ದರೆ ಕೇಣಿಯಲ್ಲಿ ಮೀನುಗಾರಿಕಾ ಬಂದರನ್ನು ಅಭಿವೃದ್ಧಿ ಪಡಿಸಲಿ. ಆದರೆ, ವಾಣಿಜ್ಯ ಬಂದರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಸಂಜೀವ ಎಸ್. ಬಲೆಗಾರ ಮಾತನಾಡಿ, ಕಾರವಾರ-ಅಂಕೋಲಾ ಭಾಗದ ಮೀನುಗಾರರು ಈಗಾಗಲೇ ಹಲವು ಬೃಹತ್ ಯೋಜನೆಗಳಿಗಾಗಿ ಇದ್ದ ಅಲ್ಪಸ್ವಲ್ಪ ಜಮೀನು ಹಾಗೂ ಮೀನುಗಾರಿಕೆಯನ್ನು ಕಳೆದುಕೊಂಡಿದ್ದಾರೆ. ಈಗ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮುಂದಾದರೆ ಮೀನುಗಾರಿಕೆ ಉದ್ಯೋಗವೇ ಸರ್ವನಾಶವಾಗಿ ಮೀನುಗಾರ ಸಮಾಜದವರು ಬೀದಿ ಪಾಲಾಗಲಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ವಾಣಿಜ್ಯ ಬಂದರು ಬೇಡ ಎಂದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾವಿಕೇರಿ ಗ್ರಾಪಂ ಮಾಜಿ ಸದಸ್ಯ ಶ್ರೀಕಾಂತ ದುರ್ಗೇಕರ ಅವರು ಬಂದರು ನಿರ್ಮಾಣದಿಂದ ಮೀನುಗಾರರಿಗೆ ಆಗುವ ತೊಂದರೆಗಳನ್ನು ತಿಳಿಸಿದರು. ಸರ್ಕಾರ ಕೂಡಲೇ ಮೀನುಗಾರರ ಬೇಡಿಕೆಗೆ ಸ್ಪಂದಿಸಿ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಭಾವಿಕೇರಿ ಗ್ರಾಪಂ ಮಾಜಿ ಅಧ್ಯಕ್ಷೆ ಸರಿತಾ ಎಸ್.ಬಲೆಗಾರ, ಸದಸ್ಯ ಜ್ಞಾನೇಶ್ವರ ಹರಿಕಂತ್ರ, ಮಾಜಿ ಸದಸ್ಯರಾದ ಸೂರಜ ಹರಿಕಂತ್ರ, ರಾಜೇಶ್ವರಿ ಕೇಣಿಕರ, ನಾಗರತ್ನ ಹರಿಕಂತ್ರ, ಶಂಕರ ಬಲೆಗಾರ, ಪಿತಾಂಬರ ಬಲೇಗಾರ, ಶೇಖರ ಹರಿಕಂತ್ರ, ವಿಷ್ಣು ಹರಿಕಂತ್ರ, ಗೋಪಾಲ ಹರಿಕಂತ್ರ, ಕುಮಾರ ಜಿ. ಹರಿಕಂತ್ರ, ಲಕ್ಷ್ಮೀ ಹರಿಕಂತ್ರ, ಯಮುನಾ ಹರಿಕಂತ್ರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.