ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ

Ankola
Published on

ಅಂಕೋಲಾ: ತಾಲೂಕಿನ ಕೇಣಿಯಲ್ಲಿ 4119 ಕೋಟಿ ರೂ. ವೆಚ್ಚದ ಬೃಹತ್ ಖಾಸಗಿ ಬಂದರು ನಿರ್ಮಾಣಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, ಇದಕ್ಕೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ನೇತೃತ್ವದಲ್ಲಿ ಬುಧವಾರ ಅಂಕೋಲಾದಲ್ಲಿ ಮೀನುಗಾರರ ಸಭೆ ನಡೆಯಿತು.

ಜಿಎಸ್‌ಡಬ್ಲ್ಯು ಕಂಪನಿ ಇಂಜಿನಿಯರ್ ಭರಮಪ್ಪ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಕೇಣಿಯಲ್ಲಿ ಬೃಹತ್ ಬಂದರು ನಿರ್ಮಿಸಲು 2016ರಲ್ಲಿಯೇ ರೂಪುರೇಷೆ ಸಿದ್ಧಪಡಿಸಿತ್ತು. 2023ರಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುಮೋದಿಸಿದೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬಂದರು ಕಾಮಗಾರಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಸಮುದ್ರದ ಆಳ ಮತ್ತು ಇತರ ಸಾಧಕ-ಬಾಧಕಗಳ ಕುರಿತು ತಜ್ಞರ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ನಂತರ ಸ್ಥಳೀಯ ಗ್ರಾಮ ಪಂಚಾಯಿತಿಯಿಂದಲೂ ಅನುಮತಿ ಪಡೆದುಕೊಳ್ಳಲಿದ್ದೇವೆ ಎಂದರು. ಇದಕ್ಕೆ ಕೆರಳಿದ ಮೀನುಗಾರರು ಯೋಜನೆಯ ವಿರುದ್ಧ ಧಿಕ್ಕಾರ ಕೂಗಿದರು.

ಉಪವಿಭಾಗಾಧಿಕಾರಿ ಮಾತನಾಡಿ, ಬಂದರು ನಿರ್ಮಾಣಕ್ಕೆ ಕೇವಲ 150 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 25 ಮನೆಗಳು ಮಾತ್ರ ಬರುತ್ತವೆ. ಅವರಿಗೆಲ್ಲ ಕಾನೂನಿನ ಪ್ರಕಾರ ಸೂಕ್ತ ಪರಿಹಾರ ಸಿಗಲಿದೆ. ಜತೆಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದರು.

ಮೀನುಗಾರರ ಮುಖಂಡ ಶ್ರೀಕಾಂತ ಡಿ. ದುರ್ಗೇಕರ್ ಮಾತನಾಡಿ, ಕೇಣಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಿಸಿ ಎಂದು ಹಲವು ದಶಕದಿಂದ ಮನವಿ ಸಲ್ಲಿಸುತ್ತ ಬಂದರೂ ಅದನ್ನು ಮಾಡದೇ ಈಗ ಬೃಹತ್ ವಾಣಿಜ್ಯ ಬಂದರಿಗೆ ಚಾಲನೆ ನೀಡಿರುವುದು ಸಹಿಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಈ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾವಿಕೇರಿ ಗ್ರಾಪಂ. ಮಾಜಿ ಅಧ್ಯಕ್ಷ ಪಾಂಡು ಗೌಡ, ಸದಸ್ಯ ಉದಯ ವಾಮನ ನಾಯಕ, ರಾಜು ಹರಿಕಂತ್ರ ಮಾತನಾಡಿದರು.

ಸಭೆಯಲ್ಲಿ ಬಂದರು ಇಲಾಖೆಯ ಬಸಪ್ಪ ನಾಯಕ, ಮೀನುಗಾರಿಕಾ ಸಹಕಾರ್ಯದರ್ಶಿ ಪ್ರತೀಕ, ತಹಸೀಲ್ದಾರ್ ಅನಂತ ಶಂಕರ, ಪ್ರಮುಖರಾದ ಸಂಜೀವ ಬಲೆಗಾರ, ಹೂವಾ ಖಂಡೇಕರ, ಅಮರ ನಾಯ್ಕ ಇತರರಿದ್ದರು.

ಸಭೆಯ ವಿಚಾರಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ. ನಂತರ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು ಎಂದು ಚರ್ಚಿಸುತ್ತೇವೆ ಎಂದು ಉಪವಿಭಾಗಾಧಿಕಾರಿ ಹೇಳಿ ಸಭೆಯನ್ನು ಮೊಟಕುಗೊಳಿಸಿದರು. ಹಾಗೇ ಮೀನುಗಾರರ ಒತ್ತಾಯಕ್ಕೆ ಮಣಿದ ಭರಮಪ್ಪ ಡಿ. 19ರಂದು ಎರಡು ಯಂತ್ರವನ್ನು ತೆಗೆದುಕೊಂಡು ಹೋಗುತ್ತೇವೆ ಎಂದರು.

ಸಭೆಯಲ್ಲಿ ಗದ್ದಲ -ಪೊಲೀಸರ ಆಗಮನ

ನೌಕಾನೆಲೆಯಿಂದಾಗಿ ಸಾವಿರಾರು ಮೀನುಗಾರರ ಕುಟುಂಬವನ್ನು ಬೀದಿಪಾಲು ಮಾಡಲಾಯಿತು. ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ. ಈಗ ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕಾಗಿ ಮತ್ತೆ ಭೂ ಸ್ವಾಧೀನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಮೀನುಗಾರಿಕಾ ಫೆಡರೇಷನ್ ಮಾಜಿ ಅಧ್ಯಕ್ಷ ಗಣಪತಿ ಮಾಂಗ್ರೆ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಬಂದರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದ್ದಂತೆಯೇ ಉಪವಿಭಾಗಾಧಿಕಾರಿ, ನಾನು ಮಾತನಾಡುತ್ತೇನೆ ಎಂದು ಮಾತಿಗೆ ಅಡ್ಡಿಪಡಿಸಿದರು. ಆಗ ಫೆಡರೇಷನ್ ನಿರ್ದೇಶಕ ರಾಜು ಹರಿಕಂತ್ರ, ಮೀನುಗಾರರ ಮುಖಂಡರು ಮಾತನಾಡುವಾಗ ನೀವು ಅವರಿಗೆ ಅವಮಾನ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಮತ್ತೆ ಸಭೆ ಮುಂದುವರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net