ಆರು ಮೀನುಗಾರರು ನೀರುಪಾಲು

boat
Published on

ಮಂಗಳೂರು: ಹನ್ನೆರಡು ನಾಟಿಕಲ್ ಮೈಲಿ ದೂರ ಆಳಸಮುದ್ರದಲ್ಲಿ ಸೋಮವಾರ ರಾತ್ರಿ ಮೀನುಗಾರಿಕಾ ಬೋಟ್ ಮುಳುಗಿದೆ. ಅದರಲ್ಲಿದ್ದ 19 ಮಂದಿಯನ್ನು ರಕ್ಷಿಸಲಾಗಿದ್ದು, 6 ಮೀನುಗಾರರು ನೀರುಪಾಲಾಗಿದ್ದಾರೆ.

ಬೊಕ್ಕಪಟ್ಣ ಬೆಂಗ್ರೆಯ ನಿವಾಸಿಗಳಾದ ಪಾಂಡುರಂಗ ಸುವರ್ಣ(58) ಹಾಗೂ ಪ್ರೀತಂ(25) ಅವರ ಮೃತದೇಹ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ. ಕಸ್ಪಾ ಬೆಂಗ್ರೆ ನಿವಾಸಿಗಳಾದ ಜಿಯಾವುಲ್ಲಾ(32), ಹಸೈನಾರ್(25), ಅನ್ಸಾರ್(31) ಹಾಗೂ ಬೊಕ್ಕಪಟ್ಣ ಬೆಂಗ್ರೆಯ ಚಿಂತನ್(21) ನಾಪತ್ತೆಯಾದವರು.

ಕುಳಾಯಿ ಚಿತ್ರಾಪುರದ ಪ್ರಕಾಶ್ ಎಂಬುವರ ಮಾಲೀಕತ್ವದ ‘ಶ್ರೀ ರಕ್ಷಾ’ ಪರ್ಸೀನ್ ಬೋಟ್‌ನಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ 25 ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಸಾಯಂಕಾಲ 5.30ರ ವೇಳೆಗೆ ಬಲೆ ಬೀಸಿದ್ದರು. 7.30ಕ್ಕೆ ವೇಳೆಗೆ ಮೀನು ಸಹಿತ ಬಲೆ ಎಳೆಯುತ್ತಿದ್ದಾಗ ದೋಣಿ ನಿಯಂತ್ರಣ ತಪ್ಪಿ ಎಡಗಡೆಗೆ ಪಲ್ಟಿಯಾಗಿ ನೀರಿನಲ್ಲಿ ಮುಳುಗಿತು. ಮೂವರು ಸಣ್ಣ ದೋಣಿ(ಡೆಂಗಿ)ಯಲ್ಲಿದ್ದರು. ಉಳಿದವರು ಬೋಟ್‌ನಲ್ಲಿದ್ದರು. ಬೋಟ್ ಪಲ್ಟಿಯಾದಾಗ ಎಲ್ಲರೂ ನೀರಿಗೆ ಬಿದ್ದರು. 16 ಮಂದಿ ಈಜಿ ಡೆಂಗಿಯಲ್ಲಿ ರಕ್ಷಣೆ ಪಡೆದರು.

ಸಮುದ್ರದಲ್ಲೇ ರಾತ್ರಿ ಕಳೆದರು: ನೀರಿನಲ್ಲಿ ಈಜಾಡಿ ಡೆಂಗಿಯಲ್ಲಿ ರಕ್ಷಣೆ ಪಡೆದವರು ಸೋಮವಾರ ರಾತ್ರಿ ಇಡೀ ಸಮುದ್ರದ ನಡುವೆ ಡೆಂಗಿಯಲ್ಲಿ ಕಳೆದಿದ್ದಾರೆ. ವಿಪರೀತ ಗಾಳಿ ಹಾಗೂ ಸಮುದ್ರದ ಅಲೆಗೆ ಡೆಂಗಿ ಅತ್ತಿಂದಿತ್ತ ಚಲಿಸುತ್ತಿದ್ದಾಗ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ನಾಪತ್ತೆಯಾಗಿರುವ ಜತೆಗಾರರು ಕಾಣಿಸುತ್ತಿದ್ದಾರೆಯೇ ಎನ್ನುವ ಕಾತರದಿಂದ ಎಲ್ಲರೂ ರಾತ್ರಿ ಕಳೆದಿದ್ದಾರೆ. ದುರಂತ ಸಂಭವಿಸಿದ ಒಂದಷ್ಟು ದೂರದಲ್ಲಿ ಹಲವು ದೋಣಿಗಳು ಹಾದು ಹೋಗುತ್ತಿದ್ದವು. ಕೈಬೀಸಿ ಕರೆದರೂ ಅವರಿಗೆ ಗೊತ್ತಾಗಲಿಲ್ಲ. ಮೊಬೈಲ್, ವೈರ್‌ಲೆಸ್ ಎಲ್ಲವೂ ಮುಳುಗಿದ ಕಾರಣ ಸಂಪರ್ಕಕ್ಕೆ ವ್ಯವಸ್ಥೆಗಳಿರಲಿಲ್ಲ.

ಬಲೆಯಡಿ ಸಿಲುಕಿ ಸಾವು: ಮೃತಪಟ್ಟ ಪಾಂಡುರಂಗ ಸುವರ್ಣ ಉತ್ತಮ ಈಜುಪಟು ಆಗಿದ್ದರು. ನಾಪತ್ತೆಯಾಗಿರುವ ಯುವಕರೆಲ್ಲರೂ ಈಜು ಬಲ್ಲವರಾಗಿದ್ದರು. ದೋಣಿ ಪಲ್ಟಿಯಾಗುವಾಗ 6 ಮೀನುಗಾರರು ಬಲೆಯಡಿ ಸಿಲುಕಿದ ಪರಿಣಾಮ ಈಜಲು ಸಾಧ್ಯವಾಗಿಲ್ಲ. ದೂರಕ್ಕೆ ನೀರಿಗೆ ಎಸೆಯಲ್ಪಟ್ಟವರು ಈಜಿ ಡೆಂಗಿ ಸೇರಿದರು.

7 ಮಂದಿ ಒಡಿಶಾದವರು: ಶ್ರೀ ರಕ್ಷಾ ಪರ್ಸೀನ್ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ 25 ಮಂದಿ ಪೈಕಿ 7 ಮಂದಿ ಒಡಿಶಾದವರು. ಉಳಿದವರೆಲ್ಲರೂ ಮಂಗಳೂರಿನ ಬೊಕ್ಕಪಟ್ಣ ಬೆಂಗ್ರೆ, ಕಸ್ಬಾ ಬೆಂಗ್ರೆ ಪರಿಸರದ ಮೀನುಗಾರರು. ಮೀನುಗಾರಿಕಾ ಬಲೆ, ದೋಣಿ ಸೇರಿದಂತೆ ಒಟ್ಟು 70 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಪಾಂಡುರಂಗ ಮನೆಯ ಆಧಾರ ಸ್ತಂಭ: ಪಾಂಡುರಂಗ ಸುವರ್ಣ ಮನೆಯ ಆಧಾರ ಸ್ತಂಭವಾಗಿದ್ದು 30 ವರ್ಷಗಳಿಂದಲೂ ಮೀನುಗಾರಿಕೆ ವೃತ್ತಿಯನ್ನೇ ನೆಚ್ಚಿಕೊಂಡಿದ್ದರು. ಪತ್ನಿ ಹಾಗೂ 3ನೇ ತರಗತಿಯ ಪುತ್ರನನ್ನು ಅಗಲಿದ್ದಾರೆ. ಪ್ರೀತಂ ಸತೀಶ್ ಶ್ರೀಯಾನ್ ಅವರ ಪುತ್ರ. ಇವರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪ್ರೀತಂ ಬಳಿಕ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ನಾಪತ್ತೆಯಾಗಿರುವ ಚಿಂತನ್ ಕೂಡ ಮುಂಬೈಯಲ್ಲಿದ್ದವರು. ಕಳೆದ ವರ್ಷದಿಂದ ಮನೆಯಲ್ಲೇ ಇದ್ದು, ಆಗಾಗ ಮೀನುಗಾರಿಕೆಗೆ ಹೋಗುತ್ತಿದ್ದರು.

ಸ್ಥಳಕ್ಕೆ ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಭೇಟಿ ನೀಡಿ ಮಾಹಿತಿ ಪಡೆದರು. ಜಿಲ್ಲಾಧಿಕಾರಿಯವರು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.

ಕ್ಷಣಮಾತ್ರದಲ್ಲಿ ಮುಳುಗಿತು ದೋಣಿ; ಆಗಷ್ಟೇ ಕತ್ತಲಾಗಿತ್ತು. ಹಾಕಿದ್ದ ಬಲೆಯನ್ನು ಎಳೆಯುವ ಪ್ರಕ್ರಿಯೆ ನಡೆಯುತ್ತಿತ್ತು. ಜೋರಾಗಿ ಗಾಳಿ ಬೀಸಿದೆ. ಸಮುದ್ರದ ಅಲೆಗಳು ಹೆಚ್ಚಾಗಿತ್ತು. ಬೋಟ್ ಹಿಂಭಾಗ ಮುಳುಗುತ್ತಾ, ಕ್ಷಣಮಾತ್ರದಲ್ಲಿ ಎಡಗಡೆಗೆ ಪಲ್ಟಿಯಾಗಿ, ಇದ್ದವರು ನೀರಿಗೆ ಬಿದ್ದರು. ಕೆಲವರು ಬಲೆ ಹಾಗೂ ದೋಣಿಯಡಿ ಸಿಲುಕಿದರು. ಮಂಗಳವಾರ ಬೆಳಗ್ಗೆ ಶಶಿ ಮೆಂಡನ್ ಅವರ ಚಾಮುಂಡೇಶ್ವರಿ ದೋಣಿ ಬಂದು ನಮ್ಮನ್ನು ದಡಕ್ಕೆ ತರಲಾಯಿತು ರಕ್ಷಣೆಗೊಳಗಾದ ಮಹೇಶ್ ‘ವಿಜಯವಾಣಿ’ಗೆ ತಿಳಿಸಿದರು.

ರಕ್ಷಣಾ ಕಾರ್ಯಾಚರಣೆ: ದೋಣಿ ದುರಂತ ಸಂಭವಿಸಿದ ಮಾಹಿತಿ ಮಂಗಳವಾರ ಬೆಳಗ್ಗೆ ಇತರ ಮೀನುಗಾರರಿಗೆ ಗೊತ್ತಾಗಿದೆ. ತಕ್ಷಣ ಇತರ ಪರ್ಸೀನ್ ಮೀನುಗಾರರು, ಕರಾವಳಿ ಕಾವಲು ಪಡೆ, ತಣ್ಣೀರುಬಾವಿ ಜೀವರಕ್ಷಕ ಪಡೆಯವರು ನಾಪತ್ತೆಯಾದವರ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಮಧ್ಯಾಹ್ನದ ವೇಳೆಗೆ ಇಬ್ಬರ ಮೃತದೇಹ ತಣ್ಣೀರುಬಾವಿ ಜೀವರಕ್ಷಕ ಪಡೆಗೆ ಲಭಿಸಿದೆ. ಸಾಯಂಕಾಲ ತನಕ ಕಾರ್ಯಾಚರಣೆ ಮುಂದುವರಿಸಿದ್ದು, ಬಳಿಕ ನಿಲ್ಲಿಸಲಾಯಿತು. ಬುಧವಾರ ಬೆಳಗ್ಗೆ 60ಕ್ಕಿಂತಲೂ ಅಧಿಕ ಪರ್ಸೀನ್ ಬೋಟ್‌ಗಳು ನಾಪತ್ತೆಯಾದವರ ಹುಡುಕಾಟ ನಡೆಸಲಿದ್ದಾರೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

15 ವರ್ಷಗಳಿಂದ ಮೀನುಗಾರಿಕೆಗೆ ಹೋಗುತ್ತಿದ್ದೇನೆ. ಇಂತಹ ದುರಂತ ಆಗಿರಲಿಲ್ಲ. ಇದು ಸಮುದ್ರ ದಡದಿಂದ ಕೇವಲ ಒಂದು ಗಂಟೆ ದೂರದ ದಾರಿ. ಇದಕ್ಕಿಂತ 6 ಗಂಟೆ, 12 ಗಂಟೆ ಅವಧಿಯ ದಾರಿಗೂ ಹೋಗಿದ್ದೆವು. ಈ ಬೋಟ್‌ನಲ್ಲಿ 4-5 ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ಕ್ಷಣಮಾತ್ರದಲ್ಲಿ ದೋಣಿ ಮುಳುಗಿದೆ. ಘಟನೆ ಹೇಗೆ ಆಯಿತೆಂದೇ ಗೊತ್ತಾಗುತ್ತಿಲ್ಲ. ರೂಪೇಶ್ ಅಪಘಾತಕ್ಕೀಡಾದ ಬೋಟ್ ಚಾಲಕ ಮೀನುಗಾರಿಕಾ ಬೋಟ್ ದುರಂತದಲ್ಲಿ ನೀರುಪಾಲಾದ 6 ಮೀನುಗಾರರ ಪೈಕಿ ಇಬ್ಬರ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮನೆಯವರಿಗೆ ಬಿಟ್ಟು ಕೊಡಲಾಗಿದೆ. ಮೃತಪಟ್ಟ ಕುಟುಂಬಸ್ಥರಿಗೆ ಸಂಕಷ್ಟ ಪರಿಹಾರವಾಗಿ ಮೀನುಗಾರಿಕಾ ಇಲಾಖೆಯಿಂದ ತಲಾ 6 ಲಕ್ಷ ರೂ.ನೀಡಲು ಅವಕಾಶವಿದೆ. ಎಫ್‌ಐಆರ್ ಆಗಿ ಪೋಸ್ಟ್‌ಮಾರ್ಟಂ ಮಾಡಿ ಶೀಘ್ರ ಪರಿಹಾರದ ಮೊತ್ತ ನೀಡಲಾಗುವುದು. - ಡಾ.ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net