ಮೀನುಗಾರರಿಗೆ ಊರು ಸೇರುವ ತವಕ

meenu new
Published on

ಮಂಗಳೂರು: ಆಳ ಸಮುದ್ರ ಮೀನುಗಾರಿಕೆ ಹಾಗೂ ಪೂರಕ ಚಟುವಟಿಕೆಗಳಲ್ಲಿ ಮಂಗಳೂರು ಭಾಗದಲ್ಲಿ ತೊಡಗಿಸಿಕೊಂಡಿರುವ ಹೊರ ರಾಜ್ಯಗಳ ಸುಮಾರು 500 ಮೀನುಗಾರರು ಊರಿಗೆ ತೆರಳಲು ರಾಜ್ಯ ಸರ್ಕಾರದ ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಜಾರ್ಖಂಡ್, ಒಡಿಶಾ ರಾಜ್ಯಗಳ ಮೀನುಗಾರರು ನೋಂದಣಿ ಮಾಡಿಕೊಂಡವರಲ್ಲಿ ಇದ್ದಾರೆ.

ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕಾರ್ಮಿಕರನ್ನು ಬಸ್‌ಗಳಲ್ಲಿ ಕಳುಹಿಸಬಹುದು. ಉಳಿದ ಕಾರ್ಮಿಕರನ್ನು ಕಳುಹಿಸಲು ವಿಶೇಷ ರೈಲು ಸೇವೆ ದೊರೆತರೆ ಹೆಚ್ಚು ಅನುಕೂಲ ಎನ್ನುತ್ತಾರೆ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್.

ಮಂಗಳೂರು ಭಾಗದಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳಲ್ಲಿ ಬಹುಪಾಲು ಹೊರ ರಾಜ್ಯದ ಮೀನುಗಾರರೇ ದುಡಿಯುತ್ತಿದ್ದು, ಇವರಲ್ಲಿ ಸುಮಾರು 5,000 ಜನರು ಲಾಕ್‌ಡೌನ್ ಘೋಷಣೆಯಾದ ಎರಡು ದಿನ ಬಳಿಕ ಮಾರ್ಚ್ 26ರಂದು ತಮ್ಮ ರಾಜ್ಯಗಳಿಗೆ ತೆರಳಿದ್ದರು.

ಗೋವಾ, ಗುಜರಾತ್ ಮೀನು

ಪ್ರಸ್ತುತ ನಾಡದೋಣಿಗಳು ಮಾತ್ರ ಮಂಗಳೂರು ಕರಾವಳಿಯಲ್ಲಿ ಮೀನುಗಾರಿಕೆ ನಡೆಸುತ್ತಿವೆ. ಕರಾವಳಿಯ ಮತ್ಸ್ಯ ಖಾದ್ಯ ಪ್ರಿಯರ ಬೇಡಿಕೆ ಪೂರೈಸಲು ಗುಜರಾತ್, ಗೋವಾ ರಾಜ್ಯಗಳಿಂದ ದಿನಂಪ್ರತಿ ಸುಮಾರು ನಾಲ್ಕು ಐಸೋಲೇಟೆಡ್ ವಾಹನಗಳಲ್ಲಿ ಮೀನು ಮಂಗಳೂರು ಮಾರುಕಟ್ಟೆಗೆ ಬರುತ್ತದೆ. ಇದಲ್ಲದೆ ಕುಮಟಾ, ಕಾರವಾರ, ಆಂಧ್ರಪ್ರದೇಶಗಳ ಕೊಳದಲ್ಲಿ ಬೆಳೆಸಿದ ಸಿಗಡಿ ಇಲ್ಲಿ ತಲುಪುತ್ತಿದೆ.

ಮಲ್ಪೆಯಲ್ಲಿ 700 ಮೀನುಗಾರರು ಬಾಕಿ

ಉಡುಪಿ: ಲಾಕ್‌ಡೌನ್‌ನಿಂದಾಗಿ ಮಲ್ಪೆ ಬಂದರಿನಲ್ಲಿ ಅತಂತ್ರರಾಗಿದ್ದ ನೆರೆ ರಾಜ್ಯದ ಮೀನುಗಾರರನ್ನು ತವರಿಗೆ ವಾಪಸ್ ಕಳಿಸಲು ಕಳುಹಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದ್ದು, ಜಿಲ್ಲಾಡಳಿತ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ.

ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಲ್ಪೆಯಲ್ಲಿ ಅತಂತ್ರರಾಗಿರುವ ಆಂಧ್ರದ ಶ್ರೀಕಾಕುಲಂನ 300ಕ್ಕೂ ಅಧಿಕ ಮೀನುಗಾರರನ್ನು ಸುರಕ್ಷಿತವಾಗಿ ಕಳುಹಿಸಿಕೊಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದರು. ಸ್ಪಂದಿಸಿದ ಮುಖ್ಯಮಂತ್ರಿ ಕೂಡಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಮೀನುಗಾರರು ವಾಪಸ್ ತೆರಳಲು ಅವರ ರಾಜ್ಯದಿಂದ ಪಾಸ್ ವ್ಯವಸ್ಥೆಯಾಗಬೇಕು. ಇದಕ್ಕೆ ಪ್ರತ್ಯೇಕ ಕಂಪ್ಯೂಟರ್ ಮತ್ತು ಸಿಬ್ಬಂದಿ ನೇಮಕ ಮಾಡಿದ್ದು, ವಿಶೇಷ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಿಜಯವಾಣಿಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶದ 700 ಮಂದಿ ಮೀನುಗಾರರಿದ್ದು, ಆಂಧ್ರದಿಂದ 150 ಮಂದಿಗೆ ಪಾಸ್ ಲಭಿಸಿದೆ. ತಮಿಳುನಾಡಿನಿಂದ 100 ಮಂದಿಗೆ ಪಾಸ್ ಸಿಕ್ಕಿದೆ. ಇನ್ನುಳಿದವರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಟಿಕೆಟ್ ದರವನ್ನು ಅವರೇ ಪಾವತಿಸಬೇಕು. 9 ಬಸ್‌ಗಳ ಮೂಲಕ 250 ಮಂದಿ ಮಲ್ಪೆಯಿಂದ ತವರು ರಾಜ್ಯಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net