

ಉಡುಪಿ: ಕನ್ಯಾಕುಮಾರಿ ನೇರ ಸುಮಾರು 50 ನಾಟಿಕಲ್ ಮೈಲು ದೂರದಲ್ಲಿ ಕರಾವಳಿ ಕರ್ನಾಟಕದ ಮೀನುಗಾರರ ಮೇಲೆ ಅನ್ಯ ರಾಜ್ಯದ ಮೀನುಗಾರರು ಮಾಡಿರುವ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯದ ಆಳ ಸಮುದ್ರ ದೋಣಿಗಳು ಮೀನುಗಾರಿಕೆ ಮಾಡುತ್ತಿರುವಾಗ ಅನ್ಯ ರಾಜ್ಯದ ಬೋಟುಗಳು ಕರ್ನಾಟಕದ ದೋಣಿಗಳನ್ನು ಸುತ್ತುವರಿದು ಸೀಸ, ಕಲ್ಲು, ಮರದ ತುಂಡುಗಳಿಂದ ಜಖಂಗೊಳಿಸಿ ಮೀನುಗಾರರ ಮೇಲೆ ಹಲ್ಲೆ ಮಾಡಿ, ಬೋಟಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳನ್ನು ದೋಚಿ ಕಡಲುಗಳ್ಳತನ ಮಾಡಿದ್ದಾರೆ. ಈಗಾಗಲೇ ಆಳಸಮುದ್ರ ಮೀನುಗಾರರ ಸಮಿತಿಗಳು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ ತಾವು ಮೀನುಗಾರರಿಗೆ ಆಗಿರುವ ಆರ್ಥಿಕ ನಷ್ಟವನ್ನು ಭರಿಸಿ, ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಭದ್ರತಾ ವ್ಯವಸ್ಥೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಖಂಡನೆ
ಕರ್ನಾಟಕ ರಾಜ್ಯದ ಮೀನುಗಾರರ ಮೇಲೆ ಅನ್ಯರಾಜ್ಯದ ಬೋಟಿನವರು ಹಲ್ಲೆ ಮಾಡಿರುವ ಬಗ್ಗೆ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಖಂಡನೆ ವ್ಯಕ್ತಪಡಿಸಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಅವರಿಂದಲೇ ಮೀನುಗಾರರಿಗಾದ ನಷ್ಟವನ್ನು ಭರಿಸಿಕೊಡಬೇಕು. ರಾಜ್ಯದ ಮೀನುಗಾರರಿಗೆ ನ್ಯಾಯ ಒದಗಿಸಿ, ಸೂಕ್ತ ರಕ್ಷಣೆ ನೀಡಿ, ಮೀನುಗಾರಿಕೆಯು ಸುಗಮವಾಗಿ ನಡೆಯಲು ಅವಕಾಶವನ್ನು ಮಾಡಿಕೊಡಬೇಕಾಗಿ ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದಾರೆ.