ಮನೆಗೆ ಬೆಂಕಿ ತಗುಲಿ ಮೀನುಗಾರ ಸಾವು

03gan-Ganesh
Published on

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಭಾನುವಾರ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೀನುಗಾರಿಕೆ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ಗಂಗೊಳ್ಳಿ ಗ್ರಾಮದ ದೊಡ್ಡಹಿತ್ಲು ನಿವಾಸಿ ಗಣೇಶ್ ಖಾರ್ವಿ (45) ಸಜೀವ ದಹನಗೊಂಡಿದ್ದಾರೆ.

ಗಣೇಶ್ ಖಾರ್ವಿ ಹೊಸ ಮನೆ ಕಟ್ಟುತ್ತಿದ್ದು, ಮನೆೆ ಸಮೀಪದಲ್ಲೇ ಪುಟ್ಟ ಗುಡಿಸಲಿನಲ್ಲಿ ಪತ್ನಿ ಯಶೋದಾ ಜತೆ ವಾಸಿಸುತ್ತಿದ್ದರು. ಪತ್ನಿ ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಮನೆಯಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಗಣೇಶ ಖಾರ್ವಿ ಮಲಗಿದ್ದಲ್ಲೆ ಸುಟ್ಟು ಸಜೀವ ದಹನಗೊಂಡಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ತಿಳಿದಿಲ್ಲ.

ದಟ್ಟ ಹೊಗೆಯನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದರೂ ಗಣೇಶ ಖಾರ್ವಿ ಮನೆಯೊಳಗೆ ಇರುವುದು ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net