

ಯಳಂದೂರು: ಸಂತೆಮರಹಳ್ಳಿ ಗ್ರಾಮದ ಪ್ರವಾಸಿ ಮಂದಿರದ ಬಳಿ ಮೀನುಗಾರಿಕೆ ಇಲಾಖೆಯಿಂದ ಶಾಸಕ ಎ.ಆರ್. ಕೃಷ್ಣಮೂರ್ತಿ ಫಲಾನುಭವಿಗಳಿಗೆ ಮೀನುಗಾರಿಕೆ ಕಿಟ್‌ಗಳನ್ನು ವಿತರಣೆ ಮಾಡಿದರು.
ಮೀನುಗಾರಿಕೆಗೆ ಯಳಂದೂರು ತಾಲೂಕಿನಲ್ಲಿ ಉತ್ತಮ ಅವಕಾಶವಿದೆ. ಇಲ್ಲಿ ಪ್ರತಿ ಗ್ರಾಮದಲ್ಲೂ ಒಂದೊಂದು ಕೆರೆ ಇದೆ. ಕೆಲವು ಕೆರೆಗಳಿಗೆ ಕಾಲುವೆಯಿಂದ ನೀರು ತುಂಬುತ್ತದೆ. ಮತ್ತೆ ಕೆಲವು ಮಳೆಯಾಶ್ರಿತ ಕೆರೆಗಳಾಗಿವೆ. ಪ್ರತಿ ಗ್ರಾಮಗಳಲ್ಲೂ ಕೆಲವು ಕುಟುಂಬಗಳು ಮೀನುಗಾರಿಕೆಯನ್ನೇ ಕಸುಬಾಗಿ ಮಾಡಿಕೊಂಡಿವೆ. ಇವರ ನೆರವಿಗೆ ರಾಜ್ಯ ಸರ್ಕಾರ ಪ್ರತಿ ವರ್ಷವೂ ಮೀನುಗಾರಿಕೆ ಕಿಟ್‌ಗಳನ್ನು ವಿತರಣೆ ಮಾಡುತ್ತದೆ. ಇದರಲ್ಲಿ ತೆಪ್ಪ, ಹರಿಗೋಲು, ಲೈಫ್ ಜಾಕೆಟ್, ಬಲೆ ಸೇರಿದಂತೆ ಇತರ ಪರಿಕರಗಳು ಸೇರಿವೆ ಎಂದು ಅವರು ತಿಳಿಸಿದರು.
ಯಳಂದೂರು ತಾಲೂಕಿನ 10 ಫಲಾನುಭವಿಗಳೂ ಸೇರಿದಂತೆ ಒಟ್ಟು 34 ಜನರಿಗೆ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಂಡು ಅರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಮೀನುಗಾರಿಕೆ ಸಹಾಯಕ ನಿರ್ದೇಶಕ ವಿವೇಕ್, ಮೀನುಗಾರಿಕೆ ಹಿರಿಯ ಮೇಲ್ವಿಚಾರಕ ಮಂಜುನಾಥ್, ನಂಜುಂಡಸ್ವಾಮಿ, ಮೀನುಗಾರ ವೈ.ಕೆ. ಮೋಳೆ ಶೇಖರ್ ಇತರರು ಇದ್ದರು.