

ಕಾರವಾರ: ಮೀನಿನ ಮೂತಿ ಚುಚ್ಚಿ ಗಾಯಗೊಂಡಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ತಾಲೂಕಿನ ಮಾಜಾಳಿಯ ದಾಂಡೇಬಾಗದ ಮೀನುಗಾರ, ಪ್ರಸಿದ್ಧ ಕ್ರಿಕೆಟ್ ಪಟು ಅಕ್ಷಯ ಅನಿಲ ಮಾಜಾಳಿಕರ್(24) ಮೃತ ಯುವಕ.
ಎರಡು ದಿನಗಳ ಹಿಂದೆ ಅಕ್ಷಯ್ ಮೀನುಗಾರಿಕೆಗೆ ತೆರಳಿದಾಗ ಸ್ಥಳೀಯ ಭಾಷೆಯಲ್ಲಿ ತೋಳೆ ಕಾಂಡೆ ಮೀನು ಎಂದು ಕರೆಯುವ ಅಟ್ಲಾಂಟಿಕ್ ನೀಡಲ್ ಫಿಶ್ ಆತನ ಹೊಟ್ಟೆಗೆ ಚುಚ್ಚಿತ್ತು. ಗಾಯಗೊಂಡಿದ್ದ ಆತನನ್ನು ಕಾರವಾರ ಕ್ರಿಮ್ಸ್ ಬೋಧಕ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಗಾಯಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದರು. ಆದರೆ, ಯುಕ ಗುಣಮುಖವಾಗದ ಕಾರಣ ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ರಾತ್ರಿ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದ.
ವೈದ್ಯರ ನಿರ್ಲಕ್ಷ್ಯ ಆರೋಪ
ಯುವಕನ ಚಿಕಿತ್ಸೆಯಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೊಪಿಸಿ, ಮಾಜಾಳಿ ಭಾಗದ ನಾಗರಿಕರು, ಕ್ರಿಕೆಟ್ ಪಟುಗಳು ನೂರಾರು ಸಂಖ್ಯೆಯಲ್ಲಿ ಕ್ರಿಮ್ಸ್ ಎದುರು ಜಮಾಯಿಸಿ ಗುರುವಾರ ಪ್ರತಿಭಟನೆ ನಡೆಸಿದರು. ಯುವಕನ ಹೊಟ್ಟೆಯಲ್ಲಿ ಮೀನಿನ ಭಾಗಗಳು ಉಳಿದುಕೊಂಡಿದ್ದವು. ಅವುಗಳನ್ನು ತೆಗೆಯದೇ ಹೊಲಿಗೆ ಹಾಕಿದ್ದರಿಂದ ಯುವಕ ಮೃತಪಟ್ಟಿದ್ದಾನೆ ಎಂದು ದೂರಿದರು. ಸ್ವತಂತ್ರ ವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ಡೀನ್ ಡಾ.ಪೂರ್ಣಿಮಾ ಆಗಮಿಸಿ, ವೈದ್ಯರಿಂದ ಯಾವುದೇ ನಿರ್ಲಕ್ಷ್ಯವಾಗಿದೆ ಎಂದು ಸ್ಪಷ್ಟಪಡಿಸಿದ ನಂತರವೂ ಪ್ರತಿಭಟನಾಕಾರರು ತಣ್ಣಗಾಗಲಿಲ್ಲ. ಎಂಎಲ್‌ಸಿ ಗಣಪತಿ ಉಳ್ವೇಕರ್, ಶಾಸಕ ಸತೀಶ ಸೈಲ್ ಸ್ಥಳಕ್ಕೆ ಆಗಮಿಸಿ ಕ್ರಿಮ್ಸ್ ವೈದ್ಯರು ಮತ್ತು ಡೀನ್ ಜತೆ ಸಭೆ ನಡೆಸಿದರು. ನಂತರ ಸ್ಥಳೀಯ ಪ್ರತಿಭಟನಾಕಾರರ ಜತೆ ಮಾತನಾಡಿ ಸಮಾಧಾನ ಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೈಲ್, `ಮೀನು ಯುವಕನ ಹೊಟ್ಟೆಯ ಮೇಲ್ಭಾಗಕ್ಕೆ ಮಾತ್ರವಲ್ಲ. ಹೊಟ್ಟೆಯೊಳಗಿನ ಅವಯವಗಳಿಗೂ ಗಾಯ ಮಾಡಿದಂತೆ ಕಾಣುತ್ತದೆ. ಕಾರವಾರ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ. ಇದರಿಂದ ಸಿಟಿ ಸ್ಕ್ಯಾನ್ ಮಾಡಿ ಅದರ ಆಧಾರದ ಮೇಲೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ವೈದ್ಯರಿಂದ ಲೋಪವಾಗಿದೆಯೇ ಇಲ್ಲವೇ ಎಂಬುದನ್ನು ಹೇಳಲು ನಾನು ತಜ್ಞನಲ್ಲ. ಹಾಗಾಗಿ ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಡೀನ್ ಡಾ.ಪೂರ್ಣಿಮಾ ಅವರಿಗೆ ಸೂಚಿಸಿದ್ದೇನೆ. ಮರಣೋತತ್ತರ ಪರೀಕ್ಷೆಯ ವರದಿ ಹಾಗೂ ಡೀನ್ ಅವರು ನೀಡಿದ ವರದಿಯನ್ನು ಉನ್ನತ ಆಸ್ಪತ್ರೆಯ ತಜ್ಞರ ಎದುರಿಟ್ಟು, ಚರ್ಚೆ ನಡೆಸುತ್ತೇನೆ.' ಎಂದು ಭರವಸೆ ನೀಡಿದರು. ಈ ಬಗ್ಗೆ ಕ್ರಿಮ್ಸ್ನಲ್ಲಿ ಪ್ರತ್ಯೇಕ ಸಭೆ ನಡೆಸುತ್ತೇನೆ ಎಂದರು. ಹೆಚ್ಚುವರಿ ಎಸ್‌ಪಿಗಳಾದ ಕೃಷ್ಣಮೂರ್ತಿ ಹಾಗೂ ಜಗದೀಶ ಅವರು ಸ್ಥಳಕ್ಕೆ ಆಗಮಿಸಿ ಸಾಕಷ್ಟು ಸಿಬ್ಬಂದಿ ನಿಯೋಜಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದರು. ಯುವಕ ಮೃತಪಟ್ಟ ಬಗ್ಗೆ ಚಿತ್ತಾಕುಲಾ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಯಾವುದೇ ಅಧಿಕೃತ ದೂರು ಬಂದಿಲ್ಲ,
ಸಣ್ಣ ಮೀನು ಗಾಯಪಡಿಸಿದ್ದು ಹೇಗೆ..?
ಸಣ್ಣ ಮೀನೊಂದು ಗಟ್ಟಿಮುಟ್ಟಾದ ಯುವಕನ ಮೇಲೆ ಮಾರಣಾಂತಿಕ ಗಾಯ ಮಾಡಿದ್ದು ಹೇಗೆ ಹೇಗೆ ಎಂದು ಅಚ್ಚರಿ ಉಂಟಾಗುತ್ತದೆ. ನೀಡಲ್ ಫಿಶ್‌ಗಳ ಮೂತಿ ಅತಿ ಚೂಪಾಗಿರುತ್ತದೆ. ಇದರಿಂದಲೇ ಅದರ ಹೆಸರನ್ನು ನೀಡಲ್(ಸೂಜಿ) ಎಂದು ಕರೆಯಲಾಗುತ್ತದೆ. ಸಮುದ್ರಲ್ಲಿ ಅದು ನೀರು ಬಿಟ್ಟು ಮೇಲೆ ಹಾರುತ್ತಿರುತ್ತದೆ. ಹಾಗೆ ಹಾರುವ ಸಂದರ್ಭದಲ್ಲಿ ಯಾವುದಾದರೂ ವಸ್ತುಗಳು ಅಡ್ಡಬಂದರೆ ಅದಕ್ಕೆ ಅದರ ಮೂತಿ ಚುಚ್ಚಿಕೊಳ್ಳುವುದಿದೆ. ಆದರೆ, ಈ ಮೀನು ವಿಷವಲ್ಲ. ಹಲವು ಬಾರಿ ಮೀನುಗಾರರಿಗೆ ಈ ಮೀನಿನಿಂದ ದಾಳಿಯಾಗಿದ್ದಿದೆ. ಆದರೆ, ಯುವಕ ಅಕ್ಷಯ ಅವರ ಹೊಟ್ಟೆಗೆ ಮೀನು ಚುಚ್ಚಿಕೊಂಡಿದ್ದರಿಂದ ಸಮಸ್ಯೆಯಾಯಿತು. ಅಲ್ಲದೇ ಅವರು ಅಲ್ಲೇ ಮೀನನ್ನು ಕಿತ್ತು ಬಿಸಾಕಿದ್ದರು. ಹೊಟ್ಟೆಯಿಂದ ಕಿತ್ತು ತೆಗೆಯುವಾಗ ಮೀನಿನ ಮೂತಿಯ ಭಾಗಗಳು ದೇಹದಲ್ಲಿ ಉಳಿದಿರುವ ಸಾಧ್ಯತೆ ಇದ್ದು, ಅದರಿಂದ ಸಮಸ್ಯೆ ಆಗಿರುವ ಸಾಧ್ಯತೆ ಇದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.