

ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿಗೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ, ಪ್ರವಾಹ ಹೆಚ್ಚಿದರೆ ಮೀನುಗಾರರು ಆದಾಯದಿಂದ ವಂಚಿತರಾಗುತ್ತಾರೆ. ಮೀನುಗಾರರು ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಮೀನುಗಾರಿಕೆಗೆ ನದಿಗೆ ಇಳಿಯದಂತೆ ತಹಸೀಲ್ದಾರ್ ಸೂಚಿಸಿರುವುದರಿಂದ ಮೀನುಗಾರರು ಮೀನು ಹಿಡಿಯಲು ಹಳ್ಳ, ಕೆರೆಗಳನ್ನು ಅವಲಂಬಿಸುವಂತಾಗಿದೆ.
ಕಂಪ್ಲಿ ಪಟ್ಟಣದಲ್ಲಿ 52ಕುಟುಂಬಗಳು, ಸಣಾಪುರದಲ್ಲಿ 20, ಇಟಗಿಯಲ್ಲಿ 35ಕುಟುಂಬಗಳು ಸೇರಿದಂತೆ ನದಿಪಾತ್ರದ ಜನರು ಮೀನುಗಾರಿಕೆಯನ್ನೆ ಅವಲಂಬಿಸಿದ್ದಾರೆ. ನದಿಯಲ್ಲಿ ಮೀನುಗಾರಿಕೆಗೆ ಹೋದರೆ ಇಬ್ಬರು ಮೀನುಗಾರರು ಕನಿಷ್ಟ 25ರಿಂದ 40ಕೇಜಿ ಮೀನು ಹಿಡಿದು ಆದಾಯಗಳಿಸುತ್ತಾರೆ. ಕೆರೆ, ಹಳ್ಳಗಳಿಗೆ ತೆರಳಿದರೆ ಏಳೆಂಟು ಕೇಜಿಗೆ ಮೀನು ದೊರೆಯುವ ಪ್ರಮಾಣ ಕುಸಿಯುತ್ತದೆ. ಮೀನುಗಾರರಿಗೆ ಕೆಲಸ ಇಲ್ಲದಿದ್ದರಿಂದ ಆದಾಯದಿಂದ ವಂಚಿತರಾಗಬೇಕಾಗುತ್ತದೆ.
ಮೀನು ಹಿಡಿಯುವವರನ್ನು ಕೃಷಿ ಕೂಲಿ, ಇತರೆ ಕೂಲಿ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಮೀನುಗಾರ ಕುಟುಂಬಗಳು ಮೀನು ಇಲ್ಲದಿದ್ದರೆ ಕೆಲಸ ಇಲ್ಲದೆ ಆದಾಯ ವಂಚಿತರಾಗುತ್ತಾರೆ. ಮೀನು ಹುಡುಕಿಕೊಂಡು ದೂರದ ಕೆರೆ, ಹಳ್ಳಗಳಿಗೆ ತೆರಳುವುದರಿಂದ ವ್ಯಾಪ್ತಿ ಸಮಸ್ಯೆ ಉಂಟಾಗುವುದಲ್ಲದೆ, ವೆಚ್ಚ ಹೆಚ್ಚಾಗಿ ಆದಾಯ ಗಿಟ್ಟುವುದಿಲ್ಲ. ಮೀನುಗಾರಿಕೆಗೆ ಅನುಮತಿ ನಿರಾಕರಿಸಿರುವುದರಿಂದ ಪೂರಕ ಸಾಮಾಗ್ರಿಗಳ ವ್ಯಾಪಾರ ಮಂದವಾಗಿದೆ.
ಜು.1ರಿಂದ ನದಿಗೆ ಮೀನುಗಾರಿಕೆಗೆ ಇಳಿಯದಿದ್ದರಿಂದ ಬಹುತೇಕ ಮೀನುಗಾರ ಕುಟುಂಬಗಳು ಉದ್ಯೋಗವಂಚಿತವಾಗಿವೆ ಎಂದು ಮೀನುಗಾರರಾದ ಅಶೋಕ, ಇಟಗಿಯ ಜಂಬುನಾಥ ಗೌಡ ಇತರರು ಗೋಳು ತೋಡಿಕೊಂಡಿದ್ದಾರೆ.