

ಕುಂದಾಪುರ: ಕಳೆದ ಸಾಲಿನಲ್ಲಿ ಬೈಂದೂರು, ಕುಂದಾಪುರ ಪರಿಸರದಲ್ಲಿ ಸಾವಿರಾರು ಪಂಜರ ಮೀನುಗಳ ಸಾವು ಸುದ್ದಿ ಮರೆಯುವ ಮುನ್ನಾ ಮತ್ತೆ ಅದೇ ರೀತಿಯಲ್ಲಿ ಈ ಬಾರಿ ಪಂಚಗಂಗಾವಳಿ ಹೊಳೆಯಲ್ಲಿ ಪಂಜರ ಮೀನುಗಳ ನಿಗೂಢ ಸಾವು ಮೀನು ಕೃಷಿಕರನ್ನು ಕಂಗಾಲನ್ನಾಗಿಸಿದೆ.
ಕಳೆದ ಮೂರು ದಿನಗಳಿಂದ ಅಲ್ಲೊಂದು ಇಲ್ಲೊಂದು ಮೀನುಗಳು ಸಾಯುತ್ತಿದ್ದು, ಭಾನುವಾರ ಸಾವಿನ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಪಂಜರಕ್ಕೆ ಪಂಜರವೇ ಖಾಲಿಯಾಗುತ್ತಿದೆ.
ಪಂಜಗಂಗಾವಳಿ ಸಂಗಮ ಪರಿಸರದಿಂದ ಬೊಬ್ಬುಕುದ್ರು ತನಕ ನೂರಾರು ಪಂಜರದಲ್ಲಿ ಮೀನು ಸಾಕಣೆ ಮಾಡುತ್ತಿದ್ದು, ಬರೋಬ್ಬರಿ ಒಂದು ಕೆಜಿ ತನಕ ತೂಕ ಬಂದ ಮೀನುಗಳು ಸಾಯುತ್ತಿವೆ. ಹತ್ತಾರು ಕುಟುಂಬಗಳು ಪಂಜರ ಮೀನು ಸಾಕಾಣಿಕೆಯಿಂದ ಬದುಕು ಕಟ್ಟಿಕೊಂಡಿದ್ದು, ಸತ್ತ ಮೀನುಗಳನ್ನು ಹೊಂಡ ತೆಗೆದು ಹೂಳುತ್ತಿದ್ದಾರೆ.
ಮೀನುಗಾರಿಕಾ ಸಚಿವನಾಗಿದ್ದ ಕಾಲದಲ್ಲಿ ಪಂಜರ ಮೀನು ಸಾವು ಸಂಭವಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಂಶೋಧನೆ ಜತೆ ಮೀನುಗಳ ಸಾವಿನ ಹಿನ್ನೆಲೆ ವರದಿ ಕೊಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಅದರಂತೆ ವರದಿಯಲ್ಲಿ ಕಲುಷಿತ ನೀರು ಮೀನುಗಳ ಸಾವಿಗೆ ಕಾರಣ ಎಂದು ವರದಿ ನೀಡಿದ್ದಾರೆ. ಪಂಜರ ಮೀನು ಸಾವಿನ ಹಿನ್ನೆಲೆಯಲ್ಲಿ ನಷ್ಟಕ್ಕೊಳಗಾದ ಮೀನು ಕೃಷಿಕರಿಗೆ ಇಲಾಖೆ ಮೂಲಕ ಮೀನು ಮರಿ ತೆಗೆದುಕೊಳ್ಳಲು ಸಹಕಾರ ನೀಡಲಾಗಿತ್ತು. ಪಂಜರ ಮೀನು ಸಾವಿನ ಹಿನ್ನೆಲೆಯಲ್ಲಿ ಸಚಿವರು ಹಾಗೂ ಸರ್ಕಾರದ ಗಮನ ಸೆಳೆಯುತ್ತೇನೆ. | ಕೋಟ ಶ್ರೀನಿವಾಸ ಪೂಜಾರಿ ಸಚಿವ