ರಸ್ತೆಯಿಡೀ ಮೀನು ದುರ್ವಾಸನೆ, ಮೀನು ಲಾರಿಗಳಿಂದ ಹರಿಯುತ್ತಿರುವ ಕಲುಷಿತ ನೀರು

FIsh Lorry Water
Published on

ಹರೀಶ್ ಮೋಟುಕಾನ ಮಂಗಳೂರು

ಮಂಗಳೂರಿನ ಮೀನುಗಾರಿಕಾ ಬಂದರ್‌ನಿಂದ ವಿವಿಧ ಕಡೆಗಳಿಗೆ ಮೀನು ಸಾಗಾಟ ಮಾಡುವ ಲಾರಿ, ಟೆಂಪೋಗಳು ಕಲುಷಿತ ನೀರನ್ನು ರಸ್ತೆಯಲ್ಲಿ ಚೆಲ್ಲುತ್ತಾ ಸಾಗುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ದಕ್ಕೆ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆ ಆರಂಭಗೊಂಡ ಬೆನ್ನಲ್ಲೇ ಮೀನಿನ ಲಾರಿಗಳು ರಸ್ತೆಯ ಮೇಲೆ ನೀರು ಚೆಲ್ಲುತ್ತಾ ಸಾಗುವ ದೃಶ್ಯ ಸಾಮಾನ್ಯವಾಗಿದೆ. ನಿಯಮ ಉಲ್ಲಂಘಿಸುವ ಮೀನು ಲಾರಿಗಳ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದಕ್ಕೆಯಿಂದ ಪ್ರತಿ ದಿನ ನೂರಾರು ಲಾರಿಗಳು ಮೀನು ತುಂಬಿಕೊಂಡು ಹೊರ ರಾಜ್ಯಗಳಿಗೆ ಸಾಗುತ್ತವೆ. ಹೀಗೆ ಸಾಗುವ ಲಾರಿಗಳು ಮೀನಿನ ಜತೆ ಹಾಕುವ ಮಂಜುಗಡ್ಡೆ ಕರಗಿ ನೀರಾಗಿ ಮೀನಿನ ಕಲ್ಮಶದ ಜತೆ ಸೇರಿ ಕಲುಷಿತಗೊಂಡ ಕೆಟ್ಟ ವಾಸನೆಯ ನೀರನ್ನು ರಸ್ತೆಯಲ್ಲಿ ಚೆಲ್ಲುತ್ತಾ ಮುಂದುವರಿಯುತ್ತವೆ. ಈ ನೀರು ಕಲ್ಮಶವಾಗಿರುವ ಜತೆಗೆ ಎಣ್ಣೆಯ ಅಂಶ ಹೊಂದಿರುತ್ತದೆ. ಲಾರಿಯ ಹಿಂದೆ ಸಾಗುವ ದ್ವಿಚಕ್ರ ಸವಾರರು ಇದರಿಂದ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಬಿದ್ದು, ಹಲವು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಲಾರಿಗಳ ಹಿಂದಿನಿಂದ ಸಂಚರಿಸುವ ವಾಹನಗಳ ಮೇಲೂ ಕಲುಷಿತ ನೀರಿನ ಸಿಂಚನವಾಗುತ್ತಿದೆ. ಫಿಶ್‌ಮೀಲ್‌ಗಳಿಗೆ ಸಾಗಿಸುವ ಕೊಳೆತ ಮೀನುಗಳನ್ನು ಪ್ಲಾಸ್ಟಿಕ್ ಹಾಳೆಗಳಲ್ಲಿ ಪ್ಯಾಕ್ ಮಾಡಿ ನೀರು ಸೋರಿಕೆಯಾಗದಂತೆ ಸಾಗಿಸಬೇಕು ಎಂದು ನಿಯಮವಿದೆ. ಆದರೆ ಪಾಲನೆಯಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೇರಳದಲ್ಲಿ ಕಠಿಣ ಕಾನೂನು: ಲಾರಿಗಳಲ್ಲಿ ಮೀನು ಸಾಗಾಟ ಮಾಡುವ ಲಾರಿಗಳಿಗೆ ಕೇರಳದಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ನಿಯಮ ಪ್ರಕಾರ 100-200 ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಲಾರಿಯ ಹಿಂಬದಿ ಅಳವಡಿಸಿಕೊಳ್ಳಬೇಕು. ವಾಹನದಲ್ಲಿರುವ ಮೀನಿನ ರಾಶಿಯಿಂದ ಹೊರ ಬರುವ ಕಲ್ಮಶ ನೀರನ್ನು ಈ ಟ್ಯಾಂಕ್‌ಗಳಲ್ಲಿ ಶೇಖರವಾಗುವಂತೆ ಮಾಡಬೇಕು. ಬಳಿಕ ನಿರ್ಜನ ಪ್ರದೇಶದಲ್ಲಿ ಚೆಲ್ಲಬೇಕು. ಆದರೆ ಕರ್ನಾಟಕದಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ. ಇದರಿಂದ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೀನಿನ ನೀರು ಬಿದ್ದು ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ. ಸ್ಥಳೀಯವಾಗಿ ಮಾರಾಟ ಮಾಡುವ ಟೆಂಪೊಗಳು ಕೂಡಾ ನಿಯಮ ಉಲ್ಲಂಘಿಸುತ್ತಿವೆ.

ಆದೇಶ ಪಾಲನೆ ಇಲ್ಲ: ಹಸಿರು ಪೀಠದ ಆದೇಶದಲ್ಲಿ ತಿಳಿಸಿರುವಂತೆ ಮೀನಿನ ಲಾರಿಗಳ ತ್ಯಾಜ್ಯ ನೀರು ಯಾವುದೇ ಕಾರಣಕ್ಕೂ ರಸ್ತೆಗೆ ಬೀಳಬಾರದು. ಮೀನುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಒಯ್ಯುವಾಗ ಕ್ರೇಟ್ ಬಳಸಬೇಕು ಮತ್ತು ಮಂಜು ನೀರು ಕೆಳಗೆ ಬೀಳುವಂತಿಲ್ಲ. 1 ಟನ್ ಮೀನು ಸಾಗಾಟ ಮಾಡುವ ವಾಹನದಲ್ಲಿ 50 ಲೀಟರ್ ತ್ಯಾಜ್ಯ ನೀರು ಸಂಗ್ರಹಕ್ಕೆ ಟ್ಯಾಂಕ್ ಹೊಂದಿರಬೇಕು ಎನ್ನುವ ನಿಯಮವಿದೆ.

ದಶಕದಿಂದ ಸಮಸ್ಯೆ: ಮಂಗಳೂರು ಮೀನುಗಾರಿಕಾ ಬಂದರ್‌ನಿಂದ ಮಂಗಳಾದೇವಿ ದೇವಳ ರಸ್ತೆ ಮೂಲಕ ಮೀನು ಸಾಗಾಟದ ಲಾರಿಗಳು ಸಂಚರಿಸಿ ರಾಷ್ಟ್ರೀಯ ಹೆದ್ದಾರಿಗೆ ಸೇರುತ್ತವೆ. ರಸ್ತೆಯುದ್ದಕ್ಕೂ ಗಬ್ಬು ವಾಸನೆಯುಕ್ತ ಮೀನಿನ ತ್ಯಾಜ್ಯ ನೀರು ಚೆಲ್ಲುತ್ತಾ ಸಾಗುತ್ತಿರುವುದರ ಬಗ್ಗೆ ದಶಕದಿಂದ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ದೂರುಗಳು ಬಂದಾಗ ಪೊಲೀಸರು ದಂಡ ವಿಧಿಸಿ ಬಿಡುಗಡೆ ಮಾಡುವುದು ಸಾಮಾನ್ಯವಾಗಿದೆ. ಇದುವರೆಗೆ ಅದಕ್ಕೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.

ಮೀನಿನ ಲಾರಿಗಳು ನೀರನ್ನು ರಸ್ತೆಯಲ್ಲಿ ಚೆಲ್ಲಿಕೊಂಡು ಹೋಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಕಾರ್ಯಾಚರಣೆ ನಡೆಸುವಂತೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಅವರಿಗೆ ಸೂಚನೆ ನೀಡಲಾಗಿದೆ. ಎನ್.ಶಶಿಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net