

ತುಮಕೂರು/ಕೊರಟಗೆರೆ: ಎ.ವೆಂಕಟಾಪುರ ಕೆರೆಯಲ್ಲಿ ಸಾವಿರಾರು ಮೀನಿನ ಮರಿಗಳು ಸತ್ತುಬಿದ್ದಿದ್ದು ಕೆರೆಯ ನೀರಿನಲ್ಲಿ ವಿಷ ಬೆರೆತಿದೆ ಎಂದು ಮೀನು ಸಾಕಣೆ ಗುತ್ತಿಗೆದಾರ ದೂರಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೀನುಗಾರಿಕೆ ಇಲಾಖೆ ವತಿಯಿಂದ 1.60 ಲಕ್ಷ ಮೀನು ಮರಿಗಳನ್ನು ಸಾಕಾಣಿಕೆಗಾಗಿ ಇತ್ತೀಚೆಗೆ ಕೆರೆಗೆ ಬಿಡಲಾಗಿತ್ತು, ಭಾನುವಾರ ಬೆಳಗ್ಗೆ ಕೆರೆಯ ದಡದಲ್ಲಿ ಸಾವಿರಾರು ಮೀನುಗಳು ಸತ್ತುಬಿದ್ದಿದ್ದು, ಸ್ಥಳೀಯರ ಗಮನಕ್ಕೆ ಬಂದಿದೆ.
ಎ.ವೆಂಕಟಾಪುರ ಗ್ರಾಮದ ಶಂಕರರಾಧ್ಯ ಕೆರೆಯಲ್ಲಿ ಮೀನು ಸಾಕಣೆಯ ಗುತ್ತಿಗೆ ಪಡೆದಿದ್ದು ಕಿಡಿಗೇಡಿಗಳು ನೀರಿನಲ್ಲಿ ವಿಷ ಹಾಕಿರುವುದರಿಂದ ಮೀನುಗಳು ಸತ್ತಿವೆ ಎಂದು ದೂರಿದ್ದಾರೆ. ಆದರೆ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಲ್.ಕುಮಾರ್ ಈ ಬಗ್ಗೆ ಮಾಹಿತಿ ಎಂದಿದ್ದಾರೆ. ಶಂಕರರಾಧ್ಯ ಗುತ್ತಿಗೆಯಲ್ಲಿ ಥರಟಿ ಗ್ರಾಮದ ಲಕ್ಷ್ಮೀಕಾಂತ ಎಂಬುವವರಿಗೆ ಮರುಗುತ್ತಿಗೆ ನೀಡಿದ್ದು 70 ಸಾವಿರ ರೂ. ಬೆಲೆಯ ಮೀನು ಮರಿಬಿಟ್ಟಿದ್ದರು ಎನ್ನಲಾಗಿದೆ. ಕಾಟ್ಲ, ಸಿಲ್ವರ್ ಮತ್ತು ಸಾಮಾನ್ಯಗೆಂಡೆ ಸೇರಿ ವಿವಿಧ ಜಾತಿಗಳ ಮೀನು ಮರಿ ಸತ್ತಿವೆ.
ಕೆರೆಯಲ್ಲಿ ಕೆಟ್ಟವಾಸನೆ!: ಎ.ವೆಂಕಟಾಪುರ ಕೆರೆಯ ಸುತ್ತಮುತ್ತ ದುರ್ವಾಸನೆ ಬೀರುತ್ತಿದೆ. ಕೆರೆಯಲ್ಲಿ ಮೀನು ಸತ್ತು ಕೊಳೆತಿದ್ದು ದುರ್ವಾಸನೆಗೆ ಕಾರಣವಾಗಿದೆ. ಮೀನುಗಾರಿಕೆ ಇಲಾಖೆ, ಸ್ಥಳೀಯರ ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕಿದೆ.
ಎ.ವೆಂಕಟಾಪುರ ಕೆರೆಯಲ್ಲಿ ಮೀನು ಸತ್ತಿರುವ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ, ಮೀನು ಸಾಕಾಣಿಕೆ ಮತ್ತು ರಕ್ಷಣೆ ಗುತ್ತಿಗೆದಾರನ ಜವಾಬ್ದಾರಿ. ವಿಷ ಹಾಕಿರುವ ಬಗ್ಗೆ ಅನುಮಾನವಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಲಿ. ಎಲ್.ಕುಮಾರ್ ಉಪನಿರ್ದೇಶಕ, ಮೀನುಗಾರಿಕೆ ಇಲಾಖೆ