

ತ್ಯಾಮಗೊಂಡ್ಲು: ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಪಡೆಯಲು ಮೀನು ಕೃಷಿ ಸಹಾಯಕವಾಗಿದ್ದು, ಮೀನುಗಾರಿಕೆ ಇಲಾಖೆಯ ತಾಂತ್ರಿಕ ಸಲಹೆ ಮತ್ತು ಸಹಾಯದಿಂದ ಲಾಭ ಹೊಂದಬಹುದು ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ್ ಹೇಳಿದರು.
ಹೋಬಳಿಯ ತಾವರೆಕೆರೆ ಗ್ರಾಮದ ರಾಮಕೃಷ್ಣಪ್ಪ ಅವರ ಮೀನು ಸಾಕಣೆ ಆವರಣದಲ್ಲಿ ಸೋಮವಾರ ಮೀನುಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ಮೀನು ಕೃಷಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಕೃತಕವಾಗಿ ಮೀನುಮರಿ ಸಂತಾನೋತ್ಪತ್ತಿ ತಂತ್ರಜ್ಞಾನ ಕಂಡುಹಿಡಿದ ಡಾ.ಹಿರಾಲಾಲ್ ಚೌಧರಿ ಸ್ಮರಣಾರ್ಥ ಮೀನು ಕೃಷಿಕರ ದಿನ ಆಚರಿಸಲಾಗುತ್ತಿದೆ. ಅವರ ಸಂಶೋಧನೆಯಿಂದ ದೇಶದಲ್ಲಿ ನೀಲಿಕ್ರಾಂತಿ ಸಮೃದ್ಧವಾಗಿಯಿತು. ಲಾಂತರ ಮೀನುಗಾರರ ಬದುಕು ಹಸನಾಗುತ್ತಿದೆ ಎಂದರು.
ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ವಾಡಿಕೆಯ ಮೀನು ಮರಿ ಉತ್ಪಾದನೆಗಿಂತ 3 ಪಟ್ಟು ಬೇಡಿಕೆ ಹೆಚ್ಚಾಗಿದೆ. ನೆಲಮಂಗಲ ತಾಲೂಕಿನ 21 ಗ್ರಾಪಂಗಳಿಂದ ಆಯ್ದ 21 ಕೆರೆಗಳನ್ನು ಮೀನು ಸಾಕಣೆಗೆ ಮೀಸಲಿಡಲಾಗಿದೆ. ಬಾವಿ ಮತ್ತು ಹೊಂಡಗಳಲ್ಲಿ ಮೀನು ಕೃಷಿಗೆ ಪೋತ್ಸಾಹ ನೀಡಿ, ಒಬ್ಬರಿಗೆ ತಲಾ 250 ಮರಿಯಂತೆ 4 ಲಕ್ಷ ಮೀನು ಮರಿ ವಿತರಿಸಿದ್ದೇವೆ ಎಂದರು.
ಸ್ವಂತ ಜಮೀನಿನಲ್ಲಿ ಸ್ವ-ಉದ್ಯೋಗ ಕೈಗೊಳ್ಳುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಉತ್ತಮ ಯೋಜನೆಗಳಿವೆ. ಇದರಲ್ಲಿ ಬೃಹತ್, ಮಧ್ಯಮ ಹಾಗೂ ಕಿರು ಯೋಜನೆಗಳಿಗೆ ಸಬ್ಸಿಡಿ, 5 ಲಕ್ಷ ರೂ.ಗಳ ಉಚಿತ ವಿಮೆ ಕೂಡ ನೀಡಲಾಗುತ್ತಿದೆ ಎಂದರು.
ಮಳವಳ್ಳಿಯ ಮೀನು ಕೃಷಿಕ ನಿರಂಜನ್ ಮಾತನಾಡಿ, ಮೀನುಗಾರಿಕೆಯಲ್ಲಿ ಸೂಕ್ತ ಕೊಳ ನಿರ್ಮಿಸುವುದು, ಸಾವಯವ ಪದ್ಧತಿಯಿಂದ ಪಂಚಗವ್ಯ ಉಪಯೋಗಿಸಿ ಉತ್ತಮ ಇಳುವರಿ ಮೂಲಕ ಮೀನು ಕೃಷಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಸ್ಥಳಕ್ಕೆ ಬಂದವರಿಗೆ ಪ್ರಾತ್ಯಕೆ ತೋರಿಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಕೊಳ್ಳುವ ಗ್ರಾಹಕರನ್ನು ಗುರುತಿಸಿ ಮೀನು ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.
ತಂತ್ರಜ್ಞಾನ ಅಭಿವೃದ್ಧಿ: ದೊಡ್ಡಬಳ್ಳಾಪುರದ ಸುರೇಶ್ ಹೊಳ್ಳ ಅವರು ಮೀನು ಹಿಡಿಯುವ ಸಾಧನ ಪ್ರದರ್ಶಿಸಿ ಮಾತನಾಡಿ, ಈ ಸಾಧನದಿಂದ 25 ಕೆಜಿವರೆಗಿನ ಮೀನುಗಳನ್ನು ಒಂದು ದಿನದಲ್ಲಿ ಹಿಡಿಯಬಹುದು. ಇದನ್ನು ಇನ್ನೂ ಉತ್ತಮಪಡಿಸುತ್ತಿದ್ದು, ಸಿಸಿ ಕ್ಯಾಮರಾ ಅಳವಡಿಸಿ ಕಳ್ಳರು ಮೀನು ಕದಿಯಲು ಬಂದರೆ ಮಾಲೀಕರಿಗೆ ಕರೆ ಬರುವಂತೆ ಮಾಡಲಾಗುತ್ತಿದೆ. ಇದರಿಂದ ಕೆರೆಯನ್ನು ಗುತ್ತಿಗೆಗೆ ಪಡೆದಿರುವವರಿಗೆ ಹೆಚ್ಚಿನ ಲಾಭವಾಗುತ್ತದೆ ಎಂದರು.
ಸೂಕ್ತ ಮಾಹಿತಿ ಕೊರತೆಯಿಂದ ಮೀನು ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ಮೀನು ಕೃಷಿಕರು ಬಳಸುವ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ನೀಡುವುದು ಮತ್ತು ಅವರ ಉತ್ಪನ್ನಗಳಿಗೆ ದಲ್ಲಾಳಿಗಳ ಹಸ್ತೇಪವಿಲ್ಲದಂತೆ ಮಾರುಕಟ್ಟೆಯಲ್ಲಿ ನೇರ ಮಾರಾಟದೊಂದಿಗೆ ಲಾಭ ಗಳಿಸುವ ಉದ್ದೇಶದಿಂದ ರೈತ ಉತ್ಪಾದಕ ಕಂಪನಿಯನ್ನು ಪ್ರಾರಂಭ ಮಾಡಲಾಗಿದೆ. ಈ ಮೂಲಕ ಅನುಕೂಲ ಪಡೆದುಕೊಳ್ಳಬಹುದು ಸಂಯೋಜಕ ಪ್ರಸನ್ನಕುಮಾರ್ ಹೇಳಿದರು.
ಅಂಗನವಾಡಿ ಮಕ್ಕಳಿಗೆ ಪೌಷ್ಟಿಕಯುಕ್ತ ಒಣಗಿದ ಮೀನಿನ ಪ್ಯಾಕೆಟ್ ವಿತರಿಸಲಾಯಿತು.
ನೆಲಮಂಗಲ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಅಮೃತಾ, ಮೀನು ಕೃಷಿಕ ಷರೀಫ್, ದೇವನಹಳ್ಳಿ ಮೀನು ಕೃಷಿಕ ಸಹಕಾರ ಸಂದ ಅಧ್ಯಕ್ಷ ಆಂಜನಪ್ಪ, ತಾವರೆಕೆರೆ ರಾಮಕೃಷ್ಣಪ್ಪ, ದೇವನಹಳ್ಳಿ ರೈತ ಉತ್ಪಾದಕ ಕಂಪನಿ ಸಿಇಒ ಮೀನಾ, ನವೀನ್, ಕೃಷಿಕರಾದ ನಟರಾಜು, ಜಯರಾಂ, ರಂಗನಾಥ್, ಕೊಡಗಿಬೊಮ್ಮನಹಳ್ಳಿ ಗಿರೀಶ್, ಮಂಜುನಾಥ್, ನಾರಾಯಣಪ್ಪ ಇದ್ದರು.