ಕೃಷಿಹೊಂಡ ಮೀನುಸಾಕಣೆಗೂ ಕಿಸಾನ್ ಕ್ರೆಡಿಟ್

main
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕೃಷಿಕರಿಗೆ ಕಡಿಮೆ ದರದಲ್ಲಿ ಸಾಲಸೌಲಭ್ಯ ಒದಗಿಸುವ ಕಿಸಾನ್ ಕ್ರೆಡಿಟ್ ಯೋಜನೆಯನ್ನು ಮೀನುಗಾರರಿಗೂ ವಿಸ್ತರಿಸಿದ್ದು ಜಿಲ್ಲೆಯಲ್ಲಿ ಕೃಷಿ ಹೊಂಡಗಳಲ್ಲಿ ಮೀನುಗಾರಿಕೆ ನಡೆಸುತ್ತಿರುವ ರೈತರಿಗೂ ಈ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಮೀನುಗಾರಿಕೆ ಇಲಾಖೆ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಕಿಸಾನ್ ಕ್ರೆಡಿಟ್ ಮೂಲಕ ಈ ಮೊದಲಿಗೆ ಕೃಷಿಕರಿಗೆ ಕಡಿಮೆ ದರದಲ್ಲಿ ಸಾಲಸೌಲಭ್ಯ ಸಿಗುತ್ತಿತ್ತು. ಕೇಂದ್ರ ಸರ್ಕಾರ ಈ ಯೋಜನೆಯನ್ನು ಮೀನುಗಾರರಿಗೂ ವಿಸ್ತರಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಇನ್ನಿತರ ಮೀನುಗಾರರ ಜನತೆಗೆ ಕೃಷಿ ಹೊಂಡಗಳಲ್ಲಿ ಮೀನು ಸಾಕಣೆ ಮಾಡುತ್ತಿರುವ ರೈತರು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಹೊಂಡಗಳಲ್ಲಿ ಮೀನುಸಾಕಣೆ ಮಾಡುತ್ತಿರುವ ರೈತಾಪಿ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೋಂದಣಿ ಕಡ್ಡಾಯ: ಈ ಯೋಜನೆಗೆ ಒಳಪಡಲು ಮೀನುಗಾರರು ಕಡ್ಡಾಯವಾಗಿ ಮೀನುಗಾರರ ಗಣತಿಯಲ್ಲಿ ನೋಂದಣಿಯಾಗಿರಬೇಕು. ಈ ಮೂಲಕ ಸ್ಥಳೀಯ ಬ್ಯಾಂಕ್‌ಗಳಿಂದ ಸೌಲಭ್ಯ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಹೊಂಡಗಳಲ್ಲಿ ಮೀನುಸಾಕಣೆ ಮಾಡುತ್ತಿರುವ ರೈತರ ನೋಂದಣಿ ಪ್ರಕ್ರಿಯೆಗೆ ಜಿಲ್ಲಾ ಮೀನುಗಾರಿಕೆ ಇಲಾಖೆ ಚಾಲನೆ ನೀಡಿದೆ. ಜಿಲ್ಲೆಯಲ್ಲಿನ ಕೃಷಿ ಹೊಂಡಗಳಲ್ಲಿ ಮೀನುಗಾರಿಕೆ ಉತ್ತೇಜಿಸುವ ಸಲುವಾಗಿ ಜಿಲ್ಲಾ ಮೀನುಗಾರಿಕೆ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದ್ದು, ಇದರಲ್ಲಿ ಮೀನುಗಾರರ ನೋಂದಣಿ ಅವಶ್ಯಕತೆ ಬಗ್ಗೆ ಸಾಕಷ್ಟು ಪ್ರಚಾರಕ್ಕೆ ಮುಂದಾಗಿದೆ.

ಲಾಭದಾಯಕ ಉದ್ದಿಮೆ: ಜಮೀನುಗಳಲ್ಲಿ ನೀರಾವರಿಗೆ ಪೂರಕವಾಗಿರುವ ಕೃಷಿಹೊಂಡಗಳಿಗೆ ಜಿಲ್ಲಾಡಳಿತ ಹೆಚ್ಚು ಒತ್ತುನೀಡುತ್ತಿದೆ. ಕೃಷಿ ಹೊಂಡ ನಿರ್ಮಾಣಕ್ಕೆ ಕೃಷಿ ಇಲಾಖೆ ಸಾಕಷ್ಟು ಪ್ರಚಾರ ಮಾಡುತ್ತಿದೆ, ಇದರೊಂದಿಗೆ ಜಿಲ್ಲಾ ಮೀನುಗಾರಿಕೆ ಇಲಾಖೆ ಕೃಷಿ ಹೊಂಡಗಳಲ್ಲಿ ಮೀನುಗಾರಿಕೆ ನಡೆಸಲು ರೈತಾಪಿ ಜನರನ್ನು ಉತ್ತೇಜಿಸುತ್ತಿದೆ. ಇದೊಂದು ಲಾಭದಾಯ ಉದ್ದಿಮೆಯಾಗಿದ್ದು, ಕೃಷಿ ಚಟುವಟಿಕೆಗಳೊಂದಿಗೆ ಮೀನುಗಾರಿಕೆ ಮೂಲಕ ಆರ್ಥಿಕ ಲಾಭ ಗಳಿಸಬಹುದು ಎಂಬುದು ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಾಗಿದೆ.

ಮೀನುಗಾರರ ಡಿಜಟಲೀಕರಣ: ಜಿಲ್ಲೆಯಲ್ಲಿ ಮೀನುಗಾರಿಕೆ ಉದ್ಯಮದಲ್ಲಿ ತೊಡಗಿರುವ ಪ್ರತಿಯೊಬ್ಬರ ದಾಖಲಾತಿಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಇದರಲ್ಲಿ ಬಹುಮುಖ್ಯವಾಗಿ ಕೃಷಿಹೊಂಡಗಳಲ್ಲಿ ಮೀನುಸಾಕಣೆ ಮಾಡುತ್ತಿರುವ ರೈತರ ಹೆಸರನ್ನೂ ಸೇರ್ಪಡೆ ಮಾಡುತ್ತಿದ್ದು, ಮೀನುಗಾರಿರಿಗೆ ಸಿಗುವ ಸೌಲಭ್ಯಗಳು ಕೃಷಿಹೊಂಡದಲ್ಲಿನ ಮೀನುಸಾಕಣೆ ಮಾಡುವ ರೈತರಿಗೂ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಮೀನುಗಾರಿಕೆಗೆ ಉತ್ತೇಜನ: ಗ್ರಾಮೀಣ ಪ್ರದೇಶದ ಬಹುತೇಕ ರೈತರು ಕೃಷಿಹೊಂಡಗಳಲ್ಲಿ ಮೀನುಗಾರಿಕೆ ಮಾಡುತ್ತಿದ್ದು ಅವರು ಮೀನುಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಆದರೆ ಇವರು ಮೀನುಗಾರರು ಎಂಬುದಕ್ಕೆ ದಾಖಲೆ ಇರುವುದಿಲ್ಲ. ಆದ್ದರಿಂದ ಪೋರ್ಟಲ್‌ನಲ್ಲಿ ನೋಂದಣಿಯಾದರೆ ಮೀನುಗಾರರಿಗೆ ಸಿಗುವ ಸೌಲಭ್ಯಗಳು ಇವರಿಗೂ ಸಿಗುತ್ತದೆ ಇದರಿಂದ ಸ್ಥಳೀಯ ಮೀನುಗಾರಿಕೆಗೆ ಉತ್ತೇಜನ ದೊರೆಯುತ್ತದೆ.

ಸ್ವಯಂ ನೋಂದಣಿ: ಇದಕ್ಕಾಗಿಯೇ ಎನ್‌ಎ್ಡಿಪಿ ಎಂಬ (ನ್ಯಾಷನಲ್ ಪಿಶ್ಯರಿ ಡಿಜಿಟಲ್ ಪ್ಲಾಟ್‌ಪಾರ್ಮ್) ಪೋರ್ಟಲ್ ರೂಪಿಸಿದ್ದು ಮೀನುಗಾರರು ಸ್ವಯಂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮೀನುಗಾರರು ಎನ್‌ಎ್ಡಿಪಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನಷ್ಟೇ ನೋಂದಾಯಿಸಿಕೊಳ್ಳಬಹುದು. ಯಾವುದೇ ದಾಖಲೆಗಳನ್ನು ಸ್ಕಾೃನ್ ಮಾಡುವ ಅವಶ್ಯಕತೆ ಇಲ್ಲ. ನೋಂದಣಿ ವೇಳೆ 2 ಒಟಿಪಿಗಳು ಬರುತ್ತವೆ ಅವುಗಳ ಸಂಖ್ಯೆ ದಾಖಲಿಸಿ ಆಧಾರ್‌ಲಿಂಕ್ ಆಗಿರುವ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿದರೆ ಸಾಕಾಗುತ್ತದೆ. ನೋಂದಣಿ ಯಶಸ್ವಿಯಾದ ಬಳಿಕ ಮೀನುಗಾರರಿಗೆ ಪ್ರತ್ಯೇಕ ಕೋಡ್ ಸಂಖ್ಯೆ ಹಾಗೂ ನೋಂದಣಿಯಾದವರ ಭಾವಚಿತ್ರವಿರುವ ಪ್ರಮಾಣಪತ್ರ ಸಿಗುತ್ತದೆ.

ಜಿಲ್ಲೆಯಲ್ಲಿನ ಕೃಷಿಹೊಂಡಗಳಲ್ಲಿ ಮೀನುಸಾಕಣೆ ಮಾಡುತ್ತಿರುವ ರೈತರು ಈ ಯೋಜನೆಯ ವ್ಯಾಪ್ತಿಗೆ ಒಳಪಡಸಲಿದ್ದು, ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಹೊಂಡಗಳಲ್ಲಿ ಮೀನು ಸಾಕಣೆ ಮಾಡುತ್ತಿರುವ ರೈತರ ಗಣತಿಯನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದು ಮೀನುಗಾರ ಎಂಬುದಕ್ಕೆ ಅಧಿಕೃತ ಸರ್ಕಾರಿ ದಾಖಲೆಯಾಗಲಿದೆ. ಸ್ಥಳೀಯ ಮೀನುಗಾರಿಕೆಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ.

ಸುಬ್ರಹ್ಮಣ್ಯ, ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net