ಅವೈಜ್ಞಾನಿಕ ಮೀನುಗಾರಿಕೆಯಿಂದ ಮತ್ಸ್ಯ ಕ್ಷಾಮ: ಕೆಪಿಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷ ಮಂಜುನಾಥ್ ಬಿ.ಸುಣಗಾರ್

9
Published on

ಮೈಸೂರು: ದೇಶದ ಎರಡನೇ ದೊಡ್ಡ ಆರ್ಥಿಕ ಬೆನ್ನೆಲುಬಾಗಿರುವ ಮೀನುಗಾರರ ಆರ್ಥಿಕ, ಸಾಮಾಜಿಕ ಸ್ಥಿತಿ ತುಳಿತಕ್ಕೆ ಒಳಗಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮೀನುಗಾರರ ವಿಭಾಗದ ಅಧ್ಯಕ್ಷ ಮಂಜುನಾಥ್ ಬಿ.ಸುಣಗಾರ್ ಹೇಳಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗದಿಂದ ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳು ಹಾಗೂ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ಮೀನುಗಾರರು ಆರ್ಥಿಕ, ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದು ಇವರನ್ನು ಸಮಾಜದ ಮುನ್ನೆಲೆಗೆ ತರುವುದೇ ಘಟಕದ ಉದ್ದೇಶ. ಮೀನುಗಾರಿಕೆ ಇಂದು ದೇಶಕ್ಕೆ ಎರಡನೇ ಬೆನ್ನೆಲುಬಾಗಿದೆ. ಇಂದಿನ ದಿನಗಳಲ್ಲಿ ಮೀನುಗಾರರು ಆರ್ಥಿಕ, ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದು, ಇವರನ್ನು ಸಮಾಜದ ಮುನ್ನೆಲೆಗೆ ತರಬೇಕಿದೆ ಎಂದು ಹೇಳಿದರು.

ಮೀನುಗಾರಿಕೆ ಸಮುದಾಯಕ್ಕೆ ಸುದೀರ್ಘ ಇತಿಹಾಸ ಇದೆ. ಪ್ರಪಂಚದ ಅತಿ ಹಿರಿಯ ವೃತ್ತಿಗಳಲ್ಲಿ ಮೀನುಗಾರಿಕೆ ಅಗ್ರಸ್ಥಾನದಲ್ಲಿ ಇದೆ. ಆದರೆ, ಇದಕ್ಕೆ ಇಂದು ಬಹಳ ದುಸ್ಥಿತಿ ಬಂದೊದಗಿದೆ. ಸಹಕಾರ ಕ್ಷೇತ್ರದ ಜತೆಗೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಮೀನುಗಾರ ಸಮುದಾಯದವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಕಾಂಗ್ರೆಸ್ ಸದಾ ಮೀನುಗಾರರ ಜತೆ ಇದ್ದು ಅವಕಾಶ ನೀಡಬೇಕು ಎಂದು ವರಿಷ್ಠರನ್ನು ಒತ್ತಾಯಿಸಿದರು.

ಕರಾವಳಿ ಭಾಗದಲ್ಲಿ ಹೆಚ್ಚು ಮೀನುಗಾರಿಕೆ ನಡೆಯುವುದಕ್ಕಿಂತ ಒಳನಾಡು ಪ್ರದೇಶದಲ್ಲಿ ಹೆಚ್ಚು ನಡೆಯುತ್ತದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸರಿಯಾಗಿ ಕೊಡುತ್ತಿಲ್ಲ. ಅವೈಜ್ಞಾನಿಕ ಮೀನುಗಾರಿಕೆಯಿಂದ ಇಂದು ಮತ್ಸ್ಯ ಕ್ಷಾಮ ತಲೆದೋರುತ್ತಿರುವುದು ಆತಂಕಕಾರಿ ಅಂಶ. ಹಾಗಾಗಿ ಪಾರಂಪರಿಕ ಮೀನುಗಾರಿಕೆ ಹೆಚ್ಚಿಸಬೇಕು. ವೃತ್ತಿಪರ ಮೀನುಗಾರರಿಗೆ ಮಾತ್ರ ಮೀನುಗಾರಿಕೆ ಸಂಪೂರ್ಣ ಮಾಹಿತಿ ಇದ್ದು ಸರ್ಕಾರ ಅವರನ್ನು ಪ್ರೋತ್ಸಾಹಿಸಬೇಕು. ಪಾರಂಪರಿಕ ಮೀನುಗಾರಿಕೆಗೆ ಸರ್ಕಾರ ಮೀಸಲಾತಿ ನೀಡಿತ್ತು. ಎಲ್ಲ ಸೌಲಭ್ಯವನ್ನು ಮೀನುಗಾರರು ಬಳಸಿಕೊಳ್ಳಬೇಕು ಎಂದು ಹೇಳಿದರು.

ಒಳನಾಡು ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಸಿದ್ದಲಿಂಗರಾಜು ಮಾತನಾಡಿ, ಸರ್ಕಾರದ ಯೋಜನೆಗಳು ದುರುಪಯೋಗವಾಗುತ್ತಿದ್ದು ಸಹಕಾರ ಸಂಘಗಳ ಅವ್ಯವಹಾರದಿಂದ ಒಬ್ಬರ ಹಿತಕ್ಕಾಗಿ ಎಲ್ಲರೂ ನಾಶವಾಗುತ್ತಿದ್ದಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಸರ್ಕಾರ ನೀಡುತ್ತಿರುವ ಬಲೆಗಳು, ದೋಣಿಗಳು ಉಳ್ಳವರ ಪಾಲಾಗುತ್ತಿವೆ. ಪ್ರಭಾವ ಬಳಸಿ ಬಡ ಮೀನುಗಾರರಿಗೆ ಮೋಸ ಮಾಡುತ್ತಿದ್ದು, ಒಳನಾಡು ಮೀನುಗಾರಿಕೆ ಬಹಳ ಕಷ್ಟವಾಗಿದ್ದು ಸ್ಥಳೀಯ ಶಾಸಕರು ಈ ಸಂಬಂಧ ಹೆಚ್ಚಿನ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ಕುಮಾರ್ ಮಾತನಾಡಿ, ತಳ ಹಾಗೂ ವಂಚಿತ ಸಮುದಾಯಗಳಿಗೆ ಅಧಿಕಾರ ಸಿಕ್ಕಾಗ ಮಾತ್ರ ಸಂವಿಧಾನದ ಆಶಯಗಳು ಈಡೇರಲು ಸಾಧ್ಯ. ಆದ್ದರಿಂದ ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಬಲವರ್ಧನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಮೀನುಗಾರರ ನೀತಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳನ್ನು ಗುರುತಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ ಆಸೆ ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳು ಸಮಾಜದ ಮುನ್ನೆಲೆಗೆ ಬಂದು ಜೀವನ ನಡೆಸಬೇಕು ಎಂಬುದಾಗಿತ್ತು ಎಂದರು.

ಜಿಲ್ಲಾ ಮೀನುಗಾರರ ಘಟಕದ ಅಧ್ಯಕ್ಷ ಎಸ್ ಸಿದ್ದಯ್ಯ, ಡಿಸಿಸಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಎಂ ಶಿವಪ್ರಸಾದ್, ಉತ್ತನಹಳ್ಳಿ ಶಿವಣ್ಣ, ಡಿಸಿಸಿ ಕಾರ್ಯದರ್ಶಿಗಳಾದ ಎನ್.ಆರ್.ಲಕ್ಷ್ಮಣ್, ಎಂ.ಮಂಜು, ಯೋಗೇಶ್, ಜವರೇಗೌಡ, ಪ್ರವೀಣ್ ಸಿದ್ದಲಿಂಗಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net