ಕುಕ್ಕರಹಳ್ಳಿ ಕೆರೆಯಲ್ಲಿ ಮತ್ತೆ ಮೃತಪಡುತ್ತಿರುವ ಮೀನುಗಳು

Fish dying again in Kukkarahalli lake
Published on

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೆಚ್ಚುತ್ತಿರುವ ಕಲುಷಿತ ವಾತಾವರಣದಿಂದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೀನುಗಳು ಮೃತಪಟ್ಟಿದ್ದವು, ಇದೀಗ ಮತ್ತೆ ಮೀನುಗಳು ನೂರಾರು ಸಂಖ್ಯೆಯಲ್ಲಿ ಮೃತಪಟ್ಟಿವೆ.

ಕೆರೆಯ ಪಡುವಾರಹಳ್ಳಿ ಭಾಗದಲ್ಲಿ ನೂರಾರು ಮೀನುಗಳು ಮೃತಪಟ್ಟು ತೇಲುತ್ತಿವೆ. ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿರುವ ಹಿನ್ನೆಲೆಯಲ್ಲಿ ಕೆರೆಯ ವಾತಾವರಣ ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಸತ್ತುಬಿದ್ದಿರುವ ಮೀನುಗಳನ್ನು ಪಕ್ಷಿಗಳು ತಿನ್ನುತ್ತಿದ್ದು, ಅವುಗಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೀನುಗಳ ಮಾರಣ ಹೋಮದಿಂದ ಕೆರೆಯ ಸುತ್ತಮುತ್ತಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ.

ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಕೆರೆಯಲ್ಲಿ ನೀರಿನ ಪ್ರಮಾಣ ದಿನೇ ದಿನೆ ಇಳಿಕೆಯಾಗುತ್ತಿದೆ. ಇದರಿಂದ ಕಲುಷಿತ ನೀರಿನ ಪ್ರಮಾಣ ಹೆಚ್ಚಾಗಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಮೀನುಗಳು ಮೃತಪಟ್ಟಿರುವ ಸಾಧ್ಯತೆ ಇದೆ. ಇದರೊಂದಿಗೆ ಕೆರೆಯಲ್ಲಿ ಪೊಟಾಷ್ ಅಂಶ ಹಾಗೂ ಹಸಿರುನೀಲಿ ಪಾಚಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿ ಮೀನುಗಳು ಮೃತಪಡುತ್ತಿವೆ. ಕೆರೆಯಲ್ಲಿರುವ ಹಸಿರುನೀಲಿ ಪಾಚಿಯನ್ನು ತೆರವುಗೊಳಿಸಬೇಕಾಗಿದೆ. ಇದರ ಜತೆಗೆ ಬೆಳೆದಿರುವ ಹಯಸಿಂತ್ ಅನ್ನು ತೆರವುಗೊಳಿಸುವ ಕಾರ್ಯ ಆಗಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net