ಮೀನು ವಿತರಣೆ ಸ್ಥಳ ಅಭಿವೃದ್ಧಿಗೆ ಒತ್ತಾಯ

D11-BDVT
Published on

ಭದ್ರಾವತಿ: ಹಲವು ವರ್ಷಗಳಿಂದ ಮೀನು ವಿತರಣೆ ನಡೆಸುತ್ತಿರುವ ನಗರದ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗದ ಖಾಲಿ ಜಾಗವನ್ನು ಅಭಿವೃದ್ಧಿ ಅಥವಾ ಸ್ಥಳಾಂತರಕ್ಕೆ ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೀನು ವಿತರಣೆ ಸ್ಥಳದಲ್ಲಿ ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದೆ. ಮೀನಿನ ತ್ಯಾಜ್ಯಗಳಿಂದ ರೋಗರುಜಿನಗಳು ಹರಡುವ ಭೀತಿ ಎದುರಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ, ಪಾದಚಾರಿಗಳಿಗೆ, ಸ್ಥಳೀಯರಿಗೆ ಹಾಗೂ ಸಮೀಪದಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗೆ, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕುಡಿಯುವ ನೀರು, ಶೌಚಗೃಹ ಸೇರಿ ಮೂಲಸೌಲಭ್ಯಗಳಿಲ್ಲದೆ ಮೀನು ವ್ಯಾಪಾರಸ್ಥರಿಗೂ ಅನನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ಮುಖಂಡರು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಪೌರಾಯುಕ್ತ ಮನೋಹರ್, ಮೀನುಗಾರರ ಕುಟುಂಬಗಳನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಸರ್ಕಾರದಿಂದ ಅವರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ಸಹ ನಿರ್ವಿುಸಿಕೊಡಲಾಗುವುದು. ವರ್ಷದೊಳಗೆ ಎಲ್ಲವೂ ಕಾರ್ಯರೂಪಕ್ಕೆ ಬರಲಿದೆ ಎಂದರು.

ಪಕ್ಷದ ಪ್ರಮುಖರಾದ ಅಧ್ಯಕ್ಷ ಪರಮೇಶ್ವರಾಚಾರ್, ಕಾರ್ಯದರ್ಶಿ ವಿನೋದ್, ಪ್ರಮುಖರಾದ ಎಚ್.ರವಿಕುಮಾರ್, ಎನ್.ಪಿ. ಜೋಸೆಫ್, ಮುಳ್ಕೆರೆ ಲೋಕೇಶ್, ಪರಮೇಶ್ವರ್ ನಾಯ್್ಕ ಜಾವಿದ್, ಜೋಸೆಫ್, ಪೀಟರ್, ಮಹಿಳಾ ಘಟಕದ ಅಧ್ಯಕ್ಷೆ ಕಾಂತಾ ದಿನೇಶ್, ರೇಷ್ಮಾಬಾನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net