ವೈಜ್ಞಾನಿಕ ಮೀನು ಕೃಷಿಗೆ ಮುಂದಾಗಬೇಕು

fish day doddaballapura
Published on

ಮೀನುಗಾರಿಕೆ ಇಲಾಖೆ ಅಪರ ನಿರ್ದೇಶಕ ಡಿ.ತಿಪ್ಪೇಸ್ವಾಮಿ ಸಲಹೆ

ದೊಡ್ಡಬಳ್ಳಾಪುರದಲ್ಲಿ ಮೀನುಕೃಷಿಕರ ದಿನಾಚರಣೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯಲ್ಲಿ ಜಲಸಂಪನ್ಮೂಲ ಕೊರತೆ ಇದ್ದರೂ ಮೀನಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಹೊಸ ತಂತ್ರಜ್ಞಾನದ ಮೂಲಕ ಕಡಿಮೆ ನೀರಿನಲ್ಲಿ ವೈಜ್ಞಾನಿಕವಾಗಿ ಮೀನು ಕೃಷಿ ಕೈಗೊಳ್ಳಲು ಮೀನು ಕೃಷಿಕರು ಮುಂದಾಗಬೇಕು ಎಂದು ಮೀನುಗಾರಿಕೆ ಇಲಾಖೆ ಅಪರ ನಿರ್ದೇಶಕ ಡಿ.ತಿಪ್ಪೇಸ್ವಾಮಿ ಸಲಹೆ ನೀಡಿದರು.
ದೊಡ್ಡಬಳ್ಳಾಪುರದಲ್ಲಿ ಗ್ರಾಮಾಂತರ ಜಿಲ್ಲಾ ಮೀನುಗಾರಿಕೆ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಮೀನು ಕೃಷಿಕರ ದಿನಾಚರಣೆಯಲ್ಲಿ ಮಾತನಾಡಿದರು. ಮೀನು ಖಾದ್ಯ ಮಾನವನಿಗೆ ಪೌಷ್ಟಿಕಾಂಶಯುಕ್ತ ಆಹಾರವಾಗಿದ್ದು, ಹೆಚ್ಚಿನ ಮಂದಿ ಪೌಷ್ಟಿಕಾಂಶವಾಗಿ ಮೀನು ಖಾದ್ಯ ಸೇವಿಸುತ್ತಾರೆ. ಇದೊಂದು ಲಾಭದಾಯಕ ಉದ್ದಿಮೆಯಾಗಿ ಪ್ರವರ್ಧಮಾನಕ್ಕೆ ಬಂದಿದ್ದು, ಮೀನು ಕೃಷಿಕರು ವೈಜ್ಞಾನಿಕವಾಗಿ ಪ್ರಸ್ತುತ ತಂತ್ರಜ್ಞಾನ ಬಳಸಿಕೊಂಡು ಹೆಚ್ಚೆಚ್ಚು ಮೀನು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ದೇಶದಲ್ಲಿ ಮೊದಲ ಬಾರಿಗೆ 1957ರ ಜುಲೈ 10ರಂದು ಕೃತಕ ಸಂತಾನೋತ್ಪತ್ತಿ ತಂತ್ರಜ್ಞಾನದಿಂದ ಮೀನು ಮರಿ ಉತ್ಪಾದನೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಯಿತು. ಆ ದಿನದ ನೆನಪಿಗಾಗಿ ಪ್ರತಿ ವರ್ಷ ಜು.10ರಂದು ಮೀನು ಕೃಷಿಕರ ದಿನವಾಗಿ ಆಚರಿಸಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆ ಬೆಂಗಳೂರು ವಲಯದ ಜಂಟಿ ನಿರ್ದೇಶಕಿ ಯಶಸ್ವಿನಿ ತಿಳಿಸಿದರು.
ಮೀನು ಕೃಷಿಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಜಿಲ್ಲೆಯ 12 ಮಂದಿ ಪ್ರಗತಿಪರ ಮೀನುಕೃಷಿಕರನ್ನು ಸನ್ಮಾನಿಸಲಾಯಿತು. ಪ್ರಧಾನ ಮಂತ್ರಿ ಮತ್ಸೃ ಸಂಪದ ಯೋಜನೆಯಡಿ ದೊಡ್ಡಬಳ್ಳಾಪುರದಲ್ಲಿ ಆರಂಭಿಸಿರುವ ಮತ್ಸೃದರ್ಶಿನಿ ಲಾನುಭವಿಗಳಾದ ಸುಜಾತಾ ಹಾಗೂ ರವಿ ಅವರಿಗೆ ಸಹಾಯಧನದ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು. ಜಿಲ್ಲೆಯ 61 ಮೀನುಗಾರರಿಗೆ ಪ್ರಸಕ್ತ ಸಾಲಿನ ನವೀಕರಣ ಆದೇಶ ಪತ್ರ ವಿತರಿಸಲಾಯಿತು. ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಮೀನುಗಾರರಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net