

ಕಾರವಾರ: ಜಿಲ್ಲೆಯ ಕೆಲವು ಕಡೆ ಇದ್ದಕ್ಕಿದ್ದಂತೆ ರಾಶಿ, ರಾಶಿ ಮೀನುಗಳು ತೀರಕ್ಕೆ ಬಂದು ಬೀಳುತ್ತಿವೆ. ಕೆಲ ದಿನಗಳ ಹಿಂದೆ ಅಂಕೋಲಾ ಹಾರವಾಡ ತೀರದಲ್ಲಿ ಈ ರೀತಿ ಘಟನೆ ಉಂಟಾಗಿತ್ತು. ಮಂಗಳವಾರ ಕಾರವಾರ ದೇವಭಾಗದಲ್ಲಿ ಮೀನುಗಳ ಗುಂಪು ಜೀವಂತವಾಗಿ ದಡಕ್ಕೆ ಬಂದು ಬಿದ್ದಿದೆ. ತಾರ್ಲೆ ಅಥವಾ ತೋರಿ ಮೀನುಗಳು ದೊಡ್ಡ ಪ್ರಮಾಣದಲ್ಲಿ ಜೀವಂತವಾಗಿ ದಡಕ್ಕೆ ಬಂದು ಬೀಳುತ್ತಿದ್ದು, ಸ್ಥಳೀಯ ಮೀನುಗಾರರು ಅದನ್ನು ಬಾಚಿಕೊಂಡರು. ಬಲೆ ಹಾಕದೇ ಬುಟ್ಟಿ ತುಂಬ ತಾಜಾ ಮೀನು ಸಿಕ್ಕಿದ್ದಕ್ಕೆ ಖುಷಿಪಟ್ಟರು. ಆದರೆ, ಈ ವಿದ್ಯಮಾನ ಜನರಲ್ಲಿ ಅಚ್ಚರಿಯನ್ನುಂಟುಮಾಡಿದೆ.
ಕಾರಣವೇನು..?
ಪಶ್ಚಿಮ ಕರಾವಳಿ ತೀರದ ವಿವಿಧೆಡೆ ಇಂಥ ಘಟನೆ ಸಂಭವಿಸುತ್ತಿರುವುದನ್ನು ಗಮನಿಸಿದ್ದೇನೆ. ಮಂಗಳವಾರ ದೇವಬಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಸಮುದ್ರದ ವಾತಾವರಣದ ಬದಲಾವಣೆಯಿಂದ ಈ ರೀತಿ ಆಗಿರಬಹುದು ಎಂದು ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಡಲ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ಅವಧಿಯಲ್ಲಿ ಸಮುದ್ರದ ವಾತಾವರಣದಲ್ಲಿ ಬದಲಾವಣೆಯಾಗುತ್ತದೆ. ದಕ್ಷಿಣದಿಂದ ಉತ್ತರದ ಕಡೆಗೆ ಬೀಸುವ ಗಾಳಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಅವಽಗೆ ಇದ್ದಕ್ಕಿದ್ದಂತೆ ಬದಲಾಗುತ್ತದೆ. ಗಾಳಿ ಉತ್ತರದಿಂದ ದಕ್ಷಿಣಕ್ಕೆ ಬೀಸಲಾರಂಭಿಸುತ್ತದೆ. ಇದರಿಂದ ಕಡಲಿನ ಆಳದವರೆಗೆ ತಲ್ಲಣ ಉಂಟಾಗುತ್ತದೆ. ಈ ಅವಽಯಲ್ಲಿ ಸಮುದ್ರದಾಳದ ಕಸ ದಡಕ್ಕೆ ಬಂದು ಬೀಳುತ್ತದೆ. ಪ್ರತಿ ವರ್ಷ ಈ ಅವಧಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಈ ಅವಽಯಲ್ಲಿ ತಾರ್ಲೆ ಮೀನುಗಳ ಗುಂಪು ಸಮುದ್ರದ ಸುಳಿಗೆ ಸಿಕ್ಕಿಕೊಂಡು ಚದುರಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭೂತಾಯಿ ಎಂದು ಕರೆಯುವ ತಾರ್ಲೆ ಮೀನುಗಳು ದೊಡ್ಡ ಗುಂಪಿನಲ್ಲಿ ಓಡಾಟ ನಡೆಸುತ್ತವೆ. ಕೆಲವು ಬಾರಿ ಡಾಲಿನ್‌ಗಳು ಗುಂಪನ್ನು ಬೆನ್ನಟ್ಟಿ ಬಂದಾಗ ಗುಂಪು ಚದುರಿ ದಡಕ್ಕೆ ಬಂದು ಅಪ್ಪಳಿಸಿದಬಹುದು. ಅಥವಾ ಈ ಬಾರಿ ಹದವಾದ ಮಳೆಯಿಂದ ತೋರಿ ಮೀನುಗಳ ಉತ್ಪಾದನೆ ಹೆಚ್ಚಾಗಿರಬಹುದು ಎಂಬುದು ಅವರ ಅಭಿಪ್ರಾಯ.