ಹೊಸದಾಗಿ ಮೀನು ಸಾಕಣೆ ಹರಾಜು ಮಾಡಿ ; ಮೀನುಗಾರಿಕಾ ಇಲಾಖೆಗೆ ಶಾಸಕ ಸಿ.ಎಂ. ರಾಜೇಶ್ ಗೌಡ ಸೂಚನೆ

13 Sira 1
Published on

ಶಿರಾ : 25 ವರ್ಷಗಳಿಂದ ತಾಲೂಕಿನ ಕೆರೆಗಳ ಮೀನು ಸಾಕಣೆ ಟೆಂಡರ್ ಕೆಲವೇ ಕೆಲವರ ಪಾಲಾಗುತ್ತಿರುವುದರಿಂದ ಗ್ರಾಮೀಣ ರೈತರು ಅವಕಾಶ ವಂಚಿತರಾಗುತ್ತಿದ್ದಾರೆ. ಹಾಗಾಗಿ ಈಗ ನಡೆದಿರುವ ಹರಾಜು ಪ್ರಕ್ರಿಯೆ ಅನೂರ್ಜಿತಗೊಳಿಸಿ ಹೊಸದಾಗಿ ಹರಾಜು ಪ್ರಕ್ರಿಯೆ ನಡೆಸಿ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಶಾಸಕ ಸಿ.ಎಂ.ರಾಜೇಶ್ ಗೌಡ ಸೂಚಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಯಿಂದ ಸರಿಯಾದ ಪ್ರಚಾರವಿಲ್ಲದೆ ಅರ್ಹ ರೈತರು ವಂಚಿತರಾಗುತ್ತಿದ್ದಾರೆ. ಮದಲೂರು ಕೆರೆಯ ಮೀನು ಸಾಕಾಣಿಕೆ ಹರಾಜು ಕೇವಲ 2 ರಿಂದ 3 ಲಕ್ಷ ರೂಪಾಯಿಗೆ ಆಗಿದೆ. ಇದರಿಂದ ಸರ್ಕಾರಕ್ಕೆ ನಷ್ಟವಾಗಿದೆ, ಹೀಗಾಗಿ ಈಗ ನಡೆದಿರುವ ಹರಾಜು ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇದಕ್ಕೆ ಧ್ವನಿಗೂಡಿಸಿದ ಎಂಎಲ್‌ಸಿಗಳಾದ ಚಿದಾನಂದಗೌಡ ಹಾಗೂ ತಿಪ್ಪೇಸ್ವಾಮಿ, ರೈತರಿಗೆ ಜಮೀನಲ್ಲಿ ಮೀನು ಸಾಕಣೆಗೆ ಸರ್ಕಾರ ಸಹಾಯಧನ ನೀಡುತ್ತಿದೆ. ಇದರ ಬಗ್ಗೆ ಇಲಾಖೆಯಿಂದ ರೈತರಿಗೆ ಮಾಹಿತಿ, ತರಬೇತಿ ನೀಡುವ ಕೆಲಸವಾಗಲಿ ಎಂದರು.

ತಾಲೂಕಿನಾದ್ಯಂತ ಇರುವ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರಾಜೇಶ್ ಗೌಡ, ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಗುತ್ತಿಗೆದಾರರನ್ನು ತೆಗೆದುಹಾಕಿ ಹೊಸದಾಗಿ ನೇಮಕ ಮಾಡಿಕೊಳ್ಳಬೇಕು ಎಂದರು.

ತಪ್ಪದೆ ವ್ಯಾಕ್ಸಿನೇಷನ್ ಆಗಲಿ : ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ವೈದ್ಯರು ಹಾಜರಾಗುತ್ತಿಲ್ಲ ಎಂಬ ದೂರಿದೆ. ಶಾಲಾ ಮಕ್ಕಳಿಗೆ ನಿಗದಿತ ಸಮಯದಲ್ಲಿ ತಪ್ಪದೆ ವ್ಯಾಕ್ಸಿನೇಷನ್ ಆಗಬೇಕು, ಇತ್ತೀಚೆಗೆ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅತಿ ಹೆಚ್ಚು ಕರೊನಾ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಆಹಾರ ನೀಡಲು ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿಗೆ ಶಾಸಕರು ತಿಳಿಸಿದರು.

ಮದಲೂರು ಕೆರೆಯಿಂದ ಕೋಡಿ ನೀರು ಸಂಗಮೇಶ್ವರ ಪಿಕಪ್‌ಗೆ ಹರಿದು ನಂತರ ಹಳ್ಳಕ್ಕೆ ಹರಿಯುತ್ತಿದೆ. ನೀರು ವ್ಯರ್ಥವಾಗದಂತೆ ಅಕ್ಕಪಕ್ಕದ ಕೆರೆಗಳಿಗೆ ಕುಡಿಯುವ ನೀರು ಹರಿಸುವ ಯೋಜನೆ ರೂಪುರೇಷೆ ಬಗ್ಗೆ ಮಾಹಿತಿ ನೀಡಿದರೆ ಯೋಜನೆ ಕಾರ್ಯರೂಪಕ್ಕೆ ತರಲು ಸಹಾಯವಾಗುತ್ತದೆ. ಶಿರಾ ಜಾಜೀಕಟ್ಟೆ ಒತ್ತುವರಿ ತೆರವುಗೊಳಿಸಿ ಅಲ್ಲಿ ದೋಣಿ ವಿಹಾರ ಅಭಿವೃದ್ಧಿಪಡಿಸಿದರೆ ನಗರ ಪ್ರದೇಶದ ಜನರಿಗೆ ಒಂದು ಮನರಂಜನೆ ಸ್ಥಳವಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಎಂಎಲ್‌ಸಿ ಚಿದಾನಂದಗೌಡ ತಿಳಿಸಿದರು.

ಎಲ್ಲ ಕೆರೆಗಳು ಭರ್ತಿಯಾಗಿವೆ ಕೆರೆಗಳ ಏರಿಯಲ್ಲಿ ಬಿರುಕು ಅಥವಾ ಏನಾದರೂ ತಾಂತ್ರಿಕ ದೋಷಗಳು ಕಂಡು ಬಂದರೆ, ಪರಿವೀಕ್ಷಿಸಿ ಸರಿಪಡಿಸಿ ಎಂದು ಎಂಎಲ್‌ಸಿ ತಿಪ್ಪೇಸ್ವಾಮಿ, ಸಣ್ಣ ನೀರಾವರಿ ಹಾಗೂ ಜಿಪಂ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಅಂಡರ್ ಪಾಸ್ ರಸ್ತೆ ಸರಿಪಡಿಸಿ : ಶಿರಾ-ಹಿರಿಯೂರು ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ಗುಂಡಿಗಳು ಬಿದ್ದಿದ್ದು, ಅದನ್ನು ಮೊದಲು ಸರಿಪಡಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗೆ ತಹಶೀಲ್ದಾರ್ ಮಮತಾ ತಿಳಿಸಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಎಸ್.ಅನಂತರಾಜು, ಆಡಳಿತ ಅಧಿಕಾರಿ ರಮೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂಬಳ ನೀಡಿ, ಇಲ್ಲವೇ ವಿಷ ನೀಡಿ : ಆರು ತಿಂಗಳಿಂದ ಸಂಬಳ ಬಾರದೆ ಜೀವನ ನಿರ್ವಹಣೆ ಕಷ್ಟವಾಗಿದ್ದು, ನಾನು ಮತ್ತು ಇಬ್ಬರು ಮಕ್ಕಳು ವಿಷ ಕುಡಿದು ಸಾಯುವಂತಹ ಪರಿಸ್ಥಿತಿ ಬಂದಿದೆ. ಹಾಗಾಗಿ ವೇತನ ಕೊಡಿಸಲು ಕ್ರಮ ಕೈಗೊಳ್ಳಿ ಎಂದು ಹುಲಿಕುಂಟೆ ಗ್ರಾಪಂ ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮೀ ಎಂಬುವವರು ಶಾಸಕ ಸಿ.ಎಂ.ರಾಜೇಶ್ ಗೌಡ ಅವರ ಬಳಿ ಗುರುವಾರ ಅಳಲು ತೋಡಿಕೊಂಡರು. ನನ್ನ ಪತಿ ಮರಣ ಹೊಂದಿದ್ದು ಸಂಸಾರ ನಡೆಸುವುದು ಕಷ್ಟಕರವಾಗಿದೆ. ಆದರೆ, ಪಂಚಾಯಿತಿ ಅಧ್ಯಕ್ಷರ ಮಗ ವಿನಾಕಾರಣ ಸಂಬಳ ತಡೆಹಿಡಿದಿದ್ದಾರೆ. ನೀವೇ ನನಗೆ ವಿಷ ಕೊಡಿ ಎಂದು ಮಹಿಳೆ ಬೇಡಿಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕ ಹಾಗೂ ಅಧಿಕಾರಿಗಳು, ಸ್ಥಳಕ್ಕೆ ಪಿಡಿಒ ಕರೆಸಿ ಗ್ರಾಪಂ ಅಧ್ಯಕ್ಷರ ಸಹಿ ಮಾಡಿಸಿ ಕೂಡಲೇ ಸಂಬಳದ ಚೆಕ್ ವಿತರಿಸಬೇಕೆಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net