

ಮೈಸೂರು: ಮಂಕಿಪಾಕ್ಸ್‌ನ ಮೊದಲ ಶಂಕಿತ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೆ.ಆರ್. ನಗರ ತಾಲೂಕಿನ 8 ವರ್ಷದ ಬಾಲಕಿಯಲ್ಲಿ ಮಂಕಿಪಾಕ್ಸ್‌ನ ಗುಣಲಕ್ಷಣ ಕಂಡು ಬಂದಿದೆ. ಬಾಲಕಿಯ ದೇಹದಲ್ಲಿ ಮಂಕಿಪಾಕ್ಸ್‌ನಂತೆ ಗುಳ್ಳೆಯಾಕಾರದ ಗಾಯವಾಗಿದ್ದು, ಕಳೆದ 3- 4 ದಿನಗಳಿಂದ ಚಿಕಿತ್ಸೆ ಕೊಡಿಸುತ್ತಿದ್ದರೂ ಗುಣವಾಗದೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ನಗರದ ಖಾಸಗಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಮೈಮೇಲಿನ ಗುಳ್ಳೆ ಮಾದರಿಯ ಗಾಯವನ್ನು ಗಮನಿಸಿದ ಮಕ್ಕಳ ತಜ್ಞರು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಮಂಕಿಪಾಕ್ಸ್ ಗುಣಲಕ್ಷಣ ಕಂಡು ಬಂದಿರುವುದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಮನಕ್ಕೆ ತಂದಿದ್ದಾರೆ.