ಮೈಸೂರಿನಲ್ಲಿ ಮೊದಲ ಬೇಸಿಗೆ ಮಳೆ

First summer rains in Mysore
Published on

ಮೈಸೂರು: ಮೈಸೂರು ನಗರದಲ್ಲಿ ಶನಿವಾರ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ವರ್ಷದ ಮೊದಲ ಬೇಸಿಗೆ ಮಳೆ ಸುರಿಯಿತು. ಸಾಕಷ್ಟು ದಿನಗಳಿಂದ ಮಳೆ ಬರುವ ಮುನ್ಸೂಚನೆ ಇದ್ದರೂ ಮಳೆ ಸುರಿದಿರಲಿಲ್ಲ. ನಗರದಲ್ಲಿ ಸಂಜೆ 4 ಗಂಟೆಯ ನಂತರ ಮೋಡ ಕವಿದ ವಾತಾವರಣ ನಿರ್ಮಾಣಗೊಂಡು ತಣ್ಣನೆಯ ಗಾಳಿ ಬೀಸಲು ಪ್ರಾರಂಭಿಸಿತು. ರಾತ್ರಿ 8ಕ್ಕೆ ಕೆಲವು ನಿಮಿಷಗಳ ಕಾಲ ತುಂತುರು ಮಳೆ ಸುರಿಯಿತು.

ಜಿಲ್ಲೆಯಲ್ಲಿ ತಪಾಮಾನ ದಿನೇ ದಿನೆ ಏರಿಕೆಯಾಗುತ್ತಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣಗೊಂಡು ತುಂತುರು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಮಾ.23 ಮತ್ತು 24 ರಂದು 3 ಮಿ.ಮೀ., 26 ರಂದು 2 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಮಾ.25 ರಂದು ಮಳೆಯ ಸಾಧ್ಯತೆ ಇಲ್ಲ. ಈ ಅವಧಿಯಲ್ಲಿ ಕನಿಷ್ಠ 21 ಹಾಗೂ ಗರಿಷ್ಠ 33 ರಿಂದ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಅಧೀಕ್ಷಕ ಡಾ.ಸಿ. ರಾಮಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net