ಪ್ರಥಮ ಬಾರಿ ಯಶಸ್ವಿ ಯಕೃತ್ ಕಸಿ

h18-Suchirayu
Published on

ಹುಬ್ಬಳ್ಳಿ: ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಹುಬ್ಬಳ್ಳಿಯ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯಲ್ಲಿ ವಾಣಿಜ್ಯ ನಗರಿಯಲ್ಲಿಯೇ ಪ್ರಥಮ ಬಾರಿ ಯಶಸ್ವಿಯಾಗಿ ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಎಚ್‌ಪಿಬಿ ಶಸ್ತ್ರ ಚಿಕಿತ್ಸಕ ಡಾ. ಬಸಂತ ಮಹದೇವಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಹೆಪಟೋಲಾಜಿಸ್ಟ್ ಡಾ. ಸಂದೀಪ ಕುಂಬಾರ, ಬೆಂಗಳೂರಿನ ಕಸಿ ಶಸ್ತ್ರ ಚಿಕಿತ್ಸಕ ಡಾ.ರೋಹಿತ ಎಂ., ಡಾ. ಸಂಜೀವ ಚಟ್ಟಿ, ಡಾ. ಜಯಪ್ರಭು ಉತ್ತೂರ, ಡಾ. ವಿನಯ ಸಜ್ಜನ, ಡಾ. ಸಾಗರ ಕೊಳ್ಳಿ, ಡಾ. ಮಸೂದ ಅಹ್ಮದ್, ಡಾ. ರಮೇಶ ತಿಮನಾಯ್ಕರ್, ಡಾ. ಪ್ರಸಾದ ಭಾಂದಿ ಸೇರಿದಂತೆ ಹಲವು ತಜ್ಞರ ತಂಡ ಯಶಸ್ವಿ ಕಸಿ ಶಸ್ತ ಚಿಕಿತ್ಸೆ ನಡೆಸಿದೆ ಎಂದರು.
50 ವರ್ಷದ ವ್ಯಕ್ತಿಯೊಬ್ಬರು ‘ಡಿ ಕಂಪೆನ್ಸೇಟೆಡ್ ಲಿವರ್ ಸಿರೋಸಿಸ್’ ನಿಂದ ಕೊನೆಯ ಹಂತದ ಯಕೃತ್ ಕಾಯಿಲೆಯಿಂದ ಬಳಲುತ್ತಿದ್ದರು. ಹಲವು ವೈದ್ಯಕೀಯ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗಿರಲಿಲ್ಲ. ಹೀಗಾಗಿ, ಅವರ ಜೀವ ಉಳಿಸಲು ಯಕೃತ್ ಕಸಿ ಅನಿವಾರ್ಯವಾಗಿತ್ತು. ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯಲ್ಲಿ ಕಸಿ ಶಸ್ತ್ರಚಿಕಿತ್ಸೆಗೆ ಒಳಪಡಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಆದರೆ, ಅವರಿಗೆ ಯಕೃತ್ ಅಂಗ ದಾನವಾಗಿ ಸಿಗುವುದೇ ದೊಡ್ಡ ಸವಾಲಾಗಿತ್ತು. ಅಷ್ಟರಲ್ಲೇ 28 ವರ್ಷದ ಮೃತ ಯುವಕನ ಸಂಬಂಧಿಕರು ಅಂಗಾಂಗ ದಾನಕ್ಕೆ ಅನುಮತಿ ನೀಡಿದ್ದರಿಂದ ರವಿ ಅವರಿಗೆ ಪಿತ್ತಜನಕಾಂಗ ದಾನ ಲಭ್ಯವಾಯಿತು ಎಂದು ಮಾಹಿತಿ ನೀಡಿದರು.
ವೈದ್ಯರ ತಂಡ ಆ. 15ರಂದು ಯಾವುದೇ ಅಡೆತಡೆ ಇಲ್ಲದೇ 12 ತಾಸು ನಿರಂತರ ಶಸ್ತಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿತು. ಬಳಿಕ ಅವರನ್ನು ಸೆ. 9ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದರು.
ಹುಬ್ಬಳ್ಳಿ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಹೆಪಟೊಲಾಜಿಸ್ಟ್ ಡಾ. ಸಂದೀಪ ಕುಂಬಾರ ಮಾತನಾಡಿ, ಹುಬ್ಬಳ್ಳಿಯಲ್ಲಿ ಮೊದಲ ಯಕೃತ್ ಕಸಿ ಶಸ್ತ್ರಚಿಕಿತ್ಸೆ ಮಾಡಿದ್ದು ಈ ಭಾಗದ ಆರೋಗ್ಯ ಕ್ಷೇತ್ರದ ಬೆಳವಣಿಗೆ ತೋರಿಸುತ್ತದೆ. ನಮ್ಮ ವೈದ್ಯರ ತಂಡದ ನಡುವಿನ ಸಮನ್ವಯ ಕೂಡ ಪ್ರಶಂಸನೀಯ. ಉತ್ತರ ಕರ್ನಾಟಕ ಭಾಗದಲ್ಲೂ ಅಂಗಾಂಗ ಕಸಿಗೆ ಅವಕಾಶವಿದೆ ಎಂಬುದನ್ನು ಈ ಮೂಲಕ ತಿಳಿಸಿಕೊಟ್ಟಂತಾಗಿದೆ ಎಂದರು.
ಹುಬ್ಬಳ್ಳಿಯ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಜಯ ಸಿಂಗ್, ಡಾ. ಸದಾಶಿವಯ್ಯ ಸೊಪ್ಪಿನಮಠ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net