ವಿಐಎಸ್‌ಎಲ್ ಉಳಿಸಲು ಮೊದಲ ಹೆಜ್ಜೆ: ಸಚಿವ ಕುಮಾರಸ್ವಾಮಿ

centrol minister hdk visit visl
ಭದ್ರಾವತಿ ವಿಐಎಸ್‌ಎಲ್‌ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ಬಿ.ವೈ.ರಾಘವೇಂದ್ರ, ಶಾರದಾ ಪೂರ‌್ಯಾನಾಯ್ಕಾ, ಎಸ್.ಎಲ್.ಭೋಜೇಗೌಡ, ಶಾರದಾ ಅಪ್ಪಾಜಿಗೌಡ, ಅಮರೇಂದ್ರ ಪ್ರಕಾಶ್ ಇದ್ದರು.
Published on

ಶಿವಮೊಗ್ಗ: ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್)ದ ಆಸ್ತಿ ಉಳಿಸಿ ಮುಂದಿನ ದಿನಗಳಲ್ಲಿ ಕಾರ್ಮಿಕರ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲು ಬದ್ಧ. ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಉಳಿಸಲು ಮೊದಲ ಹೆಜ್ಜೆ ಇಟ್ಟಿದ್ದೇವೆ ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಪುನಃಶ್ಚೇತನ ಸಂಬಂಧ ಕಾರ್ಮಿಕರು ಮತ್ತು ಅಧಿಕಾರಿಗಳ ಜತೆಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಲೋಕಸಭಾ ಕಲಾಪ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ನಿರ್ಧಾರ ಪ್ರಕಟ ಮಾಡಿಲ್ಲ. ಆದರೆ ಕಾರ್ಖಾನೆಯನ್ನು ಉಳಿಸಲು ಖಂಡಿತವಾಗಿಯೂ ಚಿಂತನೆ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಖಾನೆ ಉಳಿವಿಗಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮತ್ತು ಶಾಸಕರಾಗಿದ್ದ ಎಂ.ಜಿ.ಅಪ್ಪಾಜಿ ಗೌಡ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಕಾರ್ಯಕ್ರಮ, ಆತ್ಮನಿರ್ಭರ ಯೋಜನೆ, ಮೇಕ್ ಇನ್ ಇಂಡಿಯಾ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಪರಿಕಲ್ಪನೆ ಮತ್ತು 2017ರ ಪಾಲಿಸಿಯಂತೆ ಕಾರ್ಖಾನೆ ಉಳಿಸಲು ಸಾಕಷ್ಟು ಅವಕಾಶಗಳಿವೆ. ಬಳ್ಳಾರಿಯ ರಮಣದುರ್ಗದಲ್ಲಿ ಕಬ್ಬಿಣದ ಅದಿರಿಗಾಗಿ ಗಣಿ ಅನುಮೋದನೆ ಸಿಕ್ಕಿದೆ. ಆದರೆ ಇನ್ನೂ ಆರಂಭವಾಗಿಲ್ಲ. ಈ ಬಗ್ಗೆಯೂ ಆರಂಭದ ಹೆಜ್ಜೆ ಇಟ್ಟಿದ್ದೇವೆ. ಇವೆಲ್ಲದಕ್ಕೂ ಉತ್ತರ ಮುಂದಿನ ದಿನಗಳಲ್ಲಿ ಸಿಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net