

ಗೋಕರ್ಣ: ಇಲ್ಲಿನ ಸಾಣೆಕಟ್ಟೆಯ ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರಿ ಸಂಘದ ಆಗರಗಳಲ್ಲಿ ಬೆಳೆಸಲಾದ ವರ್ಷದ ಮೊದಲ ಉಪ್ಪನ್ನು ಸಂಘದ ಅಧ್ಯಕ್ಷ ಅರುಣ ನಾಡ್ಕರ್ಣಿ ಸಂಗ್ರಹಿಸುವ ಮೂಲಕ ವಾರ್ಷಿಕ ಉಪ್ಪು ಶೇಖರಣಾ ಕಾರ್ಯಕ್ಕೆ ಶನಿವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಉಪ್ಪು ಉತ್ಪಾದನೆ ಪ್ರಾರಂಭಿಸಲಾಗುತ್ತಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಈ ವರ್ಷ ಒಂದು ತಿಂಗಳು ತಡವಾಗಿ ಉಪ್ಪು ಸಂಗ್ರಹ ನಡೆಯಿತು. ಸಾಣೆಕಟ್ಟೆಯ ನೈಸರ್ಗಿಕ ಉಪ್ಪು ಉತ್ಪಾದನೆಗೆ ಮೂರು ಶತಮಾನಗಳಿಗೂ ಹಿಂದಿನ ಇತಿಹಾಸವಿದ್ದು ಪ್ರತಿ ವರ್ಷ 8ರಿಂದ 10 ಸಾವಿರ ಟನ್ ಉಪ್ಪನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಣೆಕಟ್ಟೆ ಉಪ್ಪಿಗೆ ಭಾರಿ ಬೇಡಿಕೆಯಿದ್ದು 1993ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಅಯೋಡಿನ್‌ಯುಕ್ತ ಉಪ್ಪನ್ನು ಉತ್ಪಾದಿಸಿದ ಕೀರ್ತಿ ಈ ಸಂಘದ್ದಾಗಿದೆ.
ಉಪ್ಪು ಸಂಗ್ರಹಣೆ ನಿಮಿತ್ತ ಆಯೋಜಿಸಿದ್ದ ವಿಶೇಷ ಪೂಜೆಯನ್ನು ವೇ. ರವಿಕಿರಣ ಭಟ್ಟ ನಿರ್ವಹಿಸಿದರು. ಸಂಘದ ನಿರ್ದೇಶಕರಾದ ಗಜಾನನ ನಾಡ್ಕರ್ಣಿ, ರಘುನಂದನ ನಾಡ್ಕರ್ಣಿ, ಕಾರ್ಯದರ್ಶಿ ಅನಿಲ ನಾಡ್ಕರ್ಣಿ, ಮೇಲ್ವಿಚಾರಕರಾದ ದುರ್ಗೇಶ ಕಾಗಾಲ, ನವೀನ ನಾಡ್ಕರ್ಣಿ, ಶ್ರೀಪಾದ ಗುಣಿ ಮತ್ತಿತರರಿದ್ದರು.