

ಭಟ್ಕಳ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕರ ಕಚೇರಿ ನೀಡಿರುವ ವೇಳಾಪಟ್ಟಿಯಂತೆ ಪ್ರಥಮ ಪಿಯುಸಿ ಪರೀಕ್ಷೆ ನಡೆಸುವ ಬದಲು ಇಲ್ಲಿನ ಖಾಸಗಿ ಕಾಲೇಜೊಂದು ತನ್ನದೇ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸುವ ಮೂಲಕ ಸಾಕಷ್ಟು ಗೊಂದಲ ಉಂಟು ಮಾಡಿರುವ ಘಟನೆ ನಡೆದಿದೆ.,
ಪಿಯುಸಿ ಪ್ರಥಮ ವರ್ಷದ ಪರೀಕ್ಷೆ ನಡೆಸುವ ಮೊದಲು ಜಿಲ್ಲೆಯ ಪಿಯುಸಿ ಕಾಲೇಜಿನ ಪ್ರಾಂಶುಪಾಲರ ಅಸೋಸಿಯೇಶನ್ ಪ್ರತಿ ಕಾಲೇಜುಗಳಿಗೂ ಎರಡು ಆಯ್ಕೆ ನೀಡಿತ್ತು. ಒಂದು ಪ್ರಶ್ನೆ ಪತ್ರಿಕೆಯನ್ನು ಅವರವರ ಕಾಲೇಜುಗಳೇ ತಯಾರಿಸಿ ಪರೀಕ್ಷೆ ನಡೆಸುವುದು ಅಥವಾ ಜಿಲ್ಲಾಮಟ್ಟದಲ್ಲಿ ಮೂರು ಆವೃತ್ತಿಯಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಏಕರೂಪದ ವೇಳಾ ಪಟ್ಟಿಯಂತೆ ಪರೀಕ್ಷೆ ನಡೆಸುವುದು.
ಜಿಲ್ಲಾಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಪರೀಕ್ಷೆ ನಡೆಸುವುದಕ್ಕೆ ಉತ್ತರ ಕನ್ನಡ ಜಿಲ್ಲೆ ಪಿಯುಸಿ ಕಾಲೇಜ್ ಪ್ರಾಂಶುಪಾಲರ ಅಸೋಸಿಯೇಶನ್ ಸಮ್ಮತಿ ನೀಡಿತ್ತು. ಅದರಂತೆ ಕಾರವಾರದ ಉಪನಿರ್ದೇಶಕರ ಕಚೇರಿಯವರು ಮೂರು ಆವೃತ್ತಿಯಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ ಪ್ರತಿ ಕಾಲೇಜ್ಗಳಿಗೂ ನೀಡಿತ್ತು. ಜಿಲ್ಲೆಯ ಎಲ್ಲಾ ಕಾಲೇಜುಗಳು ನಿಗದಿತ ಏಕರೂಪದ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಸೂಚಿಸಿತ್ತು.
ಆದರೆ, ಭಟ್ಕಳ ಆನಂದ ಆಶ್ರಮ ಪಿಯು ಕಾಲೇಜ್ ಮಾತ್ರ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ತನ್ನದೇ ವೇಳಾಪಟ್ಟಿ ತಯಾರಿಸಿ ಕೊನೆಯಲ್ಲಿ ನಡೆಯುವ ಪರೀಕ್ಷೆಗಳನ್ನು ಮೊದಲೇ ನಡೆಸಿದೆ. ಇದರಿಂದ ಫೆ. 24ಕ್ಕೆ ನಡೆಯಬೇಕಿದ್ದ ಬಯಾಲಜಿ, ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಳನ್ನು ಫೆ. 14ರಂದೇ ನಡೆಸಿದೆ.
ಪ್ರಶ್ನೆ ಪತ್ರಿಕೆ ಹಿಂದೆ ಬಿದ್ದ ಬೇರೆ ಕಾಲೇಜ್ ವಿದ್ಯಾರ್ಥಿಗಳು
ಆನಂದ ಆಶ್ರಮ ಪಿಯು ಕಾಲೇಜು ತನ್ನದೇ ಪ್ರಶ್ನೆ ಪತ್ರಿಕೆ ರೂಪಿಸಿ ಅವರಿಗೆ ಬೇಕಾದಂತೆ ಪರೀಕ್ಷೆ ನಡೆಸಿದರೆ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ, ವೇಳಾಪಟ್ಟಿಯನ್ನು ಮಾತ್ರ ತನಗೆ ಬೇಕಾದಂತೆ ರೂಪಿಸಿಕೊಂಡು ಪ್ರಶ್ನೆ ಪತ್ರಿಕೆಯನ್ನು ಜಿಲ್ಲಾಮಟ್ಟದ್ದನ್ನೇ ಬಳಸಿದೆ. ಇದರಿಂದ ಬೇರೆ ಕಾಲೇಜ್ಗಳ ವಿದ್ಯಾರ್ಥಿಗಳು ಇದೇ ಪ್ರಶ್ನೆ ಪತ್ರಿಕೆ ತಮಗೂ ಬರಬಹುದೆಂದು ಪ್ರಶ್ನೆಪತ್ರಿಕೆ ಪಡೆಯಲು ಮುಗಿಬೀಳುತ್ತಿದ್ದಾರೆ.
ಏನಿದು ಮೂರು ಆವೃತ್ತಿಯ ಪ್ರಶ್ನೆಪತ್ರಿಕೆ
ಜಿಲ್ಲಾಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಿಸಲಾಗುತ್ತಿದ್ದು, ಪ್ರತಿ ವಿಷಯಕ್ಕೆ ಮೂರು ಸೆಟ್ ಪ್ರಶ್ನೆ ಪತ್ರಿಕೆ ರೂಪಿಸಲಾಗುತ್ತದೆ. ಇನ್ನು ಒಂದು ತಾಲೂಕಿನಲ್ಲಿ 6 ಪಪೂ ಕಾಲೇಜ್ಗಳಿದ್ದರೆ ರ್ಯಾಂಡಂ ಆಗಿ ಎರಡೆರಡು ಕಾಲೇಜ್ಗಳಿಗೆ ಒಂದೇ ಪ್ರಶ್ನೆಪತ್ರಿಕೆ ವಿತರಣೆ ಆಗುವ ಸಾಧ್ಯತೆಗಳಿರುತ್ತದೆ. ಉದಾಹರಣೆಗೆ ಫೆ. 21ರಂದು ಕೆಮೆಸ್ಟ್ರಿ ಪರೀಕ್ಷೆ ನಡೆದಿದ್ದು, ಅದರಲ್ಲಿ ಆನಂದ ಆಶ್ರಮ, ಬೀನಾ ವೈದ್ಯ, ಅಂಜುಮನ್ ಹಾಗೂ ಆರ್ಎನ್ಎಸ್ ಕಾಲೇಜ್ನ ಪ್ರಶ್ನೆ ಪತ್ರಿಕೆಗಳು ಒಂದೇ ಆಗಿದ್ದು, ಸಿದ್ಧಾರ್ಥ ಮತ್ತು ನ್ಯೂ ಇಂಗ್ಲಿಷ್ ಶಾಲೆಯ ಪ್ರಶ್ನೆ ಪತ್ರಿಕೆಗಳು ಒಂದೇ ಇದೆ. ಇದೇ ಥಿಯರಿಯ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳು ಆನಂದಾಶ್ರಮದಲ್ಲಿ ಮುಗಿದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಿಗಾಗಿ ಮುಗಿಬೀಳುತ್ತಿದ್ದಾರೆ.
ಡಿಡಿಪಿಒ ಹಾರಿಕೆ ಉತ್ತರ
ಪರೀಕ್ಷೆ ವೇಳಾಪಟ್ಟಿ ಹಾಗೂ ಪ್ರಶ್ನೆ ಪತ್ರಿಕೆ ಗೊಂದಲದ ಕುರಿತು ಡಿಡಿಪಿಒ ಸತೀಶ ನಾಯ್ಕ ಅವರಲ್ಲಿ ಪ್ರಶ್ನಿಸಿದರೆ ಅದು ಆ ರೀತಿ ಇಲ್ಲ.... ಬೇರೆ ಬೇರೆ ಕಾಲೇಜಿಗೆ ಬೇರೆ ಬೇರೆ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ ಎಂಬ ಹಾರಿಕೆ ಉತ್ತರ ನೀಡುತ್ತಿರುವುದು ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ.
ಪಾಲಕರಿಗೆ ಪೀಕಲಾಟ
ಇತ್ತ ಮಕ್ಕಳು ಮನೆಯಲ್ಲಿ ಓದುವ ಬದಲು ಆನಂದ ಆಶ್ರಮ ಕಾಲೇಜಿನ ವಿದ್ಯಾರ್ಥಿಗಳ ಹಿಂದೆ ಬಿದ್ದಿರುವುದು ಪಾಲಕರಿಗೆ ತಲೆನೋವು ತರಿಸಿದೆ.
ಭಟ್ಕಳದ ಎಲ್ಲ ಕಾಲೇಜುಗಳಿಗೆ ಪ್ರಶ್ನೆ ಪತ್ರಿಕೆಯನ್ನು ನಾವೇ ಸರಬರಾಜು ಮಾಡಿದ್ದೇವೆ. ಒಟ್ಟು 3 ಆವೃತ್ತಿಯಲ್ಲಿ ಪ್ರಶ್ನೆ ಪತ್ರಿಕೆಗಳು ತಯಾರಾಗಿದ್ದು, ಯಾರಿಗೆ ಯಾವ ಆವೃತ್ತಿ ಹೋಗುತ್ತದೆ ಎಂದು ಗೊತ್ತಾಗುವುದಿಲ್ಲ. ಆದರೆ, ಜಿಲ್ಲೆಯಿಂದ ಪ್ರಶ್ನೆ ಪತ್ರಿಕೆ ಪಡೆದರೆ ಜಿಲ್ಲೆಯ ವೇಳಾ ಪತ್ರಿಕೆ ಅನುಸರಿಸಬೇಕೆಂಬುದು ನಿಯಮವಿದೆ. ಆನಂದ ಆಶ್ರಮದ ಗೊಂದಲ ಗಮನಕ್ಕೆ ಬಂದಿದ್ದು, ಮುಂದೆ ನಡೆಯುವ ಪ್ರಶ್ನೆ ಪತ್ರಿಕೆಗಳನ್ನು ಬದಲಿಸಿ ನೀಡಲಾಗುವುದು. | ಜಿ.ಎಸ್. ಹೆಗಡೆ, ಪ್ರಾಂಶುಪಾಲರು, ನೋಡಲ್ ಕಾಲೇಜು, ಭಟ್ಕಳ ತಾಲೂಕು