

ಹುಬ್ಬಳ್ಳಿ: ಭಾರತೀಯ ವೈದ್ಯಕೀಯ ಸಂಘ ರಾಜ್ಯ ಮಹಿಳಾ ವೈದ್ಯರ ಘಟಕವು ಹಾಸನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಮಾವೇಶದಲ್ಲಿ (ಸೃಷ್ಟಿ) ಐಎಂಎ ಹುಬ್ಬಳ್ಳಿ ಮಹಿಳಾ ವೈದ್ಯರ ಘಟಕಕ್ಕೆ 2023-24ನೇ ಸಾಲಿನ ಬೆಸ್ಟ್ ಡಬ್ಲುೃಡಿಡಬ್ಲುೃ ಸೊಸೈಟಿ ಆಫ್ ದಿ ಇಯರ್‌ನಲ್ಲಿ ಪ್ರಥಮ ಬಹುಮಾನ ಲಭಿಸಿದೆ.
ಉಚಿತ ಔಷಧ, ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ, ಕ್ಯಾನ್ಸರ್ ತಪಾಸಣೆ ಸೇರಿ ವಿವಿಧ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ರಾಜ್ಯ ಘಟಕ ಪ್ರತಿ ವರ್ಷ ನೀಡುತ್ತಿದೆ. ಆದರೆ, ಸತತ ಮೂರನೇ ಬಾರಿ ಈ ಪ್ರಶಸ್ತಿಯನ್ನು ಹುಬ್ಬಳ್ಳಿ ಮಹಿಳಾ ಘಟಕ ಮುಡಿಗೇರಿಸಿಕೊಳ್ಳುತ್ತಿರುವುದು ಶ್ಲಾಘನೀಯ.
ಇದರ ಜತೆಗೆ ಐಎಂಎ ಹುಬ್ಬಳ್ಳಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಡಾ. ಸಂಗೀತಾ ಅಂಟರತಾನಿ ಅವರು ‘ನ್ಯಾಷನಲ್ ಸೇಫ್ ಮದರ್‌ಹುಡ್ ಡೇ’ ನಿಮಿತ್ತ ಅರಿವು ಮೂಡಿಸುವ ಲೇಖನ ಬರೆದು ಪ್ರಕಟಿಸಿದ್ದರ ಹಿನ್ನೆಲೆಯಲ್ಲಿ ‘ಪ್ರೆಸಿಡೆಂಟ್ ಅಪ್ರಿಸಿಯೇಷನ್ ಅವಾರ್ಡ್’ ಲಭಿಸಿದೆ.
ಐಎಂಎ ಹುಬ್ಬಳ್ಳಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಭಾರತಿ ಭಾವಿಕಟ್ಟಿ, ಕಾರ್ಯದರ್ಶಿ ಡಾ. ಆಶಾ ಪಾಟೀಲ, ಖಜಾಂಚಿ ಡಾ. ಶಿಲ್ಪಾ ಚಾಟ್ನಿ, ಡಾ. ಜಯಶ್ರೀ ಬಳಿಗಾರ, ಡಾ. ಸಂಗೀತಾ ಅಂಟರತಾನಿ ಇತರರು ಪ್ರಶಸ್ತಿ ಸ್ವೀಕರಿಸಿದರು. ಐಎಂಎ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಎಸ್., ಕಾರ್ಯದರ್ಶಿ ಡಾ.ಬಿ.ಪಿ. ಕರುಣಾಕರ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಸೌಮ್ಯಮಣಿ ಇತರರು ಇದ್ದರು.