

ರಾಮದುರ್ಗ: ಶೈಕ್ಷಣಿಕ ಸುಧಾರಣೆಗೆ ಸರ್ಕಾರ ಬದ್ಧವಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಶಾಲಾ ಕೊಠಡಿ ಮಂಜೂರಾತಿಗೆ ಶ್ರಮಿಸಿದ್ದೇನೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಕೆ.ಚಂದರಗಿ, ದಾ.ಸಾಲಾಪುರ, ಚನ್ನಾಪುರ ಡಿಎಲ್‌ಟಿ, ಹನುಮಾಪುರ ಹಾಗೂ ಆನೇಗುದ್ದಿ ಗ್ರಾಮದಲ್ಲಿ 1.5 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಒಟ್ಟು 11 ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಆರು ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಬಟಕುರ್ಕಿ ಗ್ರಾಮದಲ್ಲಿ 12.15 ಕೋಟಿ ರೂ. ವೆಚ್ಚದಲ್ಲಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆ, ಪಟ್ಟಣದ ಈರಮ್ಮ ಎಸ್.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾ ಸಭಾಂಗಣ ಹಾಗೂ ಸ್ನಾತಕೋತ್ತರ ಕಟ್ಟಡದ ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಸಿದರು.
ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಂಜಯ ಹಳ್ಳಿ, ಉಪಾಧ್ಯಕ್ಷೆ ವಿಜಯಾ ಬನ್ನೂರ, ಸೀತವ್ವ ಚವ್ಹಾಣ, ಲಲಿತಾ ಲಮಾಣಿ, ಎಸ್‌ಡಿಎಂಸಿ ಅಧ್ಯಕ್ಷ ಖೀರಪ್ಪ ಲಮಾಣಿ, ಅರ್ಜುನ ನೇಸರಗಿ, ಉಪಾಧ್ಯಕ್ಷೆ ಶಾಲಿನಿ ಇಳಿಗೇರ, ಜಿಪಂ ಎಇಇ ಮುಹಮ್ಮದ್ ಇಜಾನ್, ಸಂಪನ್ಮೂಲ ವ್ಯಕ್ತಿಗಳಾದ ಆರ್.ಎಲ್.ಮೇತ್ರಿ, ಟಿ.ಜಿ ಕರದಿನ ಇತರರಿದ್ದರು.