

ಬೆಂಗಳೂರು: ಭವಿಷ್ಯದಲ್ಲಿ ಬೆಂಗಳೂರಿಗೆ ಅತ್ಯುತ್ತಮ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಲು ಸರ್ಕಾರ ಮೊದಲ ಆದ್ಯತೆ ನೀಡಿದ್ದು, ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಆರಂಭವಾದ 3 ದಿನಗಳ ‘ನಮ್ಮ ರಸ್ತೆ - ವಿನ್ಯಾಸ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿ ಅವರು, ರಸ್ತೆ, ಪಾದಚಾರಿ ಮಾರ್ಗ ಸೇರಿ ಎಲ್ಲೆಡೆಯೂ ಶಿಸ್ತು ಹಾಗೂ ಏಕರೂಪತೆ ಸಾಧಿಸಬೇಕಿದೆ. ಇಲ್ಲದಿದ್ದರೇ ಬೆಂಗಳೂರಿಗೆ ನಾವುಗಳು ಮೋಸ ಮಾಡಿದಂತೆ. ಹಾಗಾಗಿ ಮೊದಲ ಉತ್ತಮ ರಸ್ತೆಜಾಲವನ್ನು ಅಭಿವೃದ್ಧಿಪಡಿಸಬೇಕಿದೆ ಎಂದರು.
2-3 ವರ್ಷದಲ್ಲಿ ಬೆಂಗಳೂರನ್ನು ಬದಲಾಯಿಸಲು ಸಾಧ್ಯವಿಲ್ಲ. ಮೇಲಿರುವ ಭಗವಂತ ಕೆಳಗೆ ಬಂದರೂ ಸಾಧ್ಯವಾಗದ ಕೆಲಸ. ಯೋಜನೆಗಳ ರೂಪುರೇಷೆಗಳನ್ನು ಸರಿಯಾಗಿ ಮಾಡಿ, ಜಾರಿಗೊಳಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಗುಣಮಟ್ಟ ಮತ್ತು ಏಕರೂಪತೆ ಕಾಪಾಡುವುದು ನಮ್ಮ ಗುರಿ. ಇದಕ್ಕೆ ಎಲ್ಲ ಪಾಲುದಾರರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮೂಲಸೌಕರ್ಯದಲ್ಲಿ ಏಕರೂಪತೆ ಇರಲಿ:
ನಗರದ ಎಲ್ಲ ರಸ್ತೆ, ಫುಟ್‌ಪಾತ್ ವಿನ್ಯಾಸ ಏಕರೂಪತೆಯಿಂದ ಕೂಡಿರಬೇಕು ಎನ್ನುವುದು ನಮ್ಮ ಉದ್ದೇಶ. ರಸ್ತೆಬದಿ ಕಂಬಗಳ ಬಣ್ಣವೂ ಮೊದಲೇ ನಿರ್ಧಾರ ಮಾಡಲಾಗುವುದು. ವಿವಿಧ ಕಡೆಗಳಲ್ಲಿ ಬೇರೆ, ಬೇರೆಯಾದ ವಿನ್ಯಾಸವುಳ್ಳ ಬಸ್ ನಿಲ್ದಾಣಗಳಿದ್ದು, ಅವುಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಬೇಕು. ರಸ್ತೆಬದಿ ಸಸಿಗಳನ್ನು ಎಲ್ಲಿ ನೆಡಬೇಕು? ಕಂಬಗಳು ಎಲ್ಲಿರಬೇಕು? ಮುಖ್ಯರಸ್ತೆ, ವಾರ್ಡ್ ರಸ್ತೆಗಳು ಹೇಗಿರಬೇಕು, ಪಾದಚಾರಿ ಮಾರ್ಗಗಳನ್ನು ಹೇಗೆ ನಿರ್ಮಿಸಬೇಕು? ರಸ್ತೆಯಲ್ಲಿ ಸಂಚರಿಸುವಾಗ, ನಡೆಯುವಾಗ ಹೇಗೆ ಶಿಸ್ತನ್ನು ಪಾಲಿಸಬೇಕು, ಬಸ್ ನಿಲ್ಧಾಣಗಳ ವಿನ್ಯಾಸ ಇತ್ಯಾದಿ ಬಗ್ಗೆ ಸ್ಪಷ್ಟತೆಯನ್ನು ಕಾರ್ಯಾಗಾರದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪ್ರಧಾನ ಇಂಜಿನಿಯರ್ ಪ್ರಹ್ಲಾದ್, ಶ್ರೀನಿವಾಸ್ ಅಲಿವಿಲ್ಲಿ ಹಾಗೂ ಇತರರಿದ್ದರು.
ಟನಲ್ ರಸ್ತೆಯ ನಿರ್ಮಾಣ ಸವಾಲು:
ಸುರಂಗ ರಸ್ತೆಯ ನಿರ್ಮಾಣಕ್ಕೆ ಹಲವು ಸವಾಲುಗಳಿವೆ. ಇದಕ್ಕೆ ಇನ್ನೂ ಟೆಂಡರ್ ಕರೆದಿಲ್ಲ. ಭೂ ಸ್ವಾಧೀನ, ಹಣಕಾಸು, ತಾಂತ್ರಿಕ ಅಂಶಗಳಿವೆ. ಹೊಸ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಕಾರ್ಯಗತಗೊಳಿಸಲಾಗಿದೆ. ಈ ಹಿಂದೆ ಮೆಟ್ರೋ ಮಾರ್ಗವಿರುವ ಕಡೆ ಡಬಲ್ ಡೆಕ್ಕರ್ ಸಾಧ್ಯವಾಗಿಲ್ಲ. ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಲಾಗುವುದು ಎಂದು ಡಿಸಿಎಂ ತಿಳಿಸಿದರು.
ಕೇಬಲ್ಗಳಿಗೆ ಕಡಿವಾಣಕ್ಕೆ ಸೂಚನೆ:
ನಗರದ ಹಲವು ರಸ್ತೆಗಳ ಬದಿ ಹಾಗೂ ಇನ್ನಿತರ ಕಡೆಗಳಲ್ಲಿ ಕೇಬಲ್ ವಯರ್‌ಗಳು ಹೊರಗೆ ಚಾಚಿಕೊಂಡಿವೆ. ಇವುಗಳನ್ನು ಭೂಗತವಾಗಿ ಅಳವಡಿಸುವತೆ ಪಾಲಿಕೆಗೆ ಸೂಚಿಸಿದ್ದೇನೆ. ಇಷ್ಟು ದಿನ ಏನಾದರೂ ಬದಲಾವಣೆ ಆಗುವುದೆಂದು ಕಾದೆವು, ಆದರೆ, ಏನೂ ಆಗಿಲ್ಲ. ಹಾಗಾಗಿ ಸಾರ್ವಜನಿಕರಿಗೆ ತೊಂದರೆ ಆಗುವ ಕಡೆಗಳಲ್ಲಿ ಇಂತಹ ಕೇಬಲ್ ವಯರ್‌ಗಳನ್ನು ಕತ್ತರಿಸಿ ಹಾಕುವಂತೆ ನಿರ್ದೇಶಿಸಿರುವೆ ಎಂದು ಹೇಳಿದರು.
ರಾಜಕಾರಣಿಗಳು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು, ಎಂಜಿನಿಯರ್‌ಗಳು ಇಂದು ಅಧಿಕಾರದಲ್ಲಿ ಇರುತ್ತಾರೆ, ನಾಳೆ ಹೋಗುತ್ತಾರೆ. ಅಧಿಕಾರ ಸಿಕ್ಕಾಗ ಅವರದೇ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಯಾರೂ ಇಲ್ಲದೇ ಇದ್ದರೂ ‘ನಮ್ಮರಸ್ತೆ’ ಎನ್ನುವ ಕೈಪಿಡಿ ಕೆಲಸ ಮಾಡಲು ಮಾರ್ಗದರ್ಶನ ನೀಡುತ್ತದೆ. ಹಾಗಾಗಿ ಕೈಪಿಡಿಯಲ್ಲಿರುವ ನಿಯಮಗಳ ಅನುಸಾರವೇ ಕೆಲಸ ಮಾಡುವುದು ಯುಕ್ತ.
- ಡಿ.ಕೆ.ಶಿವಕುಮಾರ್, ಡಿಸಿಎಂ