ಕನ್ನಡಿಗರಿಗೆ ಮೊದಲ ಆದ್ಯತೆ, ಎಂಆರ್‌ಪಿಎಲ್ ಸ್ಪಷ್ಟನೆ

mrpl new
Published on

ಮಂಗಳೂರು: ಎಂಆರ್‌ಪಿಎಲ್ ಕಂಪನಿಯು ಯಾವತ್ತಿಗೂ ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದು, ಸಂಸ್ಥೆಯ ಆಡಳಿತೇತರ ವಿಭಾಗದ ಒಟ್ಟು ಸಿಬ್ಬಂದಿಯಲ್ಲಿ ಶೇ.90ಕ್ಕೂ ಹೆಚ್ಚು ಮಂದಿ ಕರ್ನಾಟಕದವರೇ ಇದ್ದಾರೆ. ಇಂಟಿಗ್ರೇಟೆಡ್ ಕಾಂಪ್ಲೆಕ್ಸ್‌ನಲ್ಲಿರುವ ಶೇ.70ರಷ್ಟು ಉದ್ಯೋಗಿಗಳೂ ಕರ್ನಾಟಕದವರೇ ಎಂದು ಎಂಆರ್‌ಪಿಎಲ್ ತಿಳಿಸಿದೆ.

ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಎಂಆರ್‌ಪಿಎಲ್ ಸ್ಥಳೀಯರಿಗೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಲಾಗುತ್ತಿದೆ. ಎಂಆರ್‌ಪಿಎಲ್‌ನ ದ್ವಿತೀಯ ಶ್ರೇಣಿಯ ಶ್ರಮಿಕ ವರ್ಗದವರಲ್ಲಿ ಶೇ.80ರಷ್ಟು ರಾಜ್ಯದವರೇ ಇದ್ದಾರೆ. ವ್ಯಾಪಾರಿಗಳು, ಪೂರೈಕೆದಾರರು, ಗುತ್ತಿಗೆದಾರರು, ಸಲಹೆಗಾರರು ಮತ್ತಿತರ ಹುದ್ದೆಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ.

ಸಿಎಸ್‌ಆರ್ ಚಟುವಟಿಕೆಗಳಲ್ಲೂ ಕಳೆದ 5 ವರ್ಷದಲ್ಲಿ ರಾಜ್ಯದ ವಿವಿಧ ಕಾರ್ಯಗಳಿಗೆ ಸುಮಾರು 150 ಕೋಟಿ ರೂ. ನೀಡಿದ್ದು, ಅದರಲ್ಲೂ 120 ಕೋಟಿ ರೂ. ದ.ಕ ಜಿಲ್ಲೆಯಲ್ಲೇ ವಿತರಿಸಲಾಗಿದೆ. ಎಂಆರ್‌ಪಿಎಲ್ ಲೇಡಿಗೋಶನ್ ಆಸ್ಪತ್ರೆಯ ಆಧುನೀಕರಣ, ಇತರ ಸರ್ಕಾರಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸುವುದು, ಶಾಲಾಕಾಲೇಜುಗಳಿಗೆ ನೆರವು, ಕುಡಿಯುವ ನೀರಿನ ಘಟಕ ಇತ್ಯಾದಿ ಉದ್ದೇಶಕ್ಕೆ ನೆರವಾಗಿದೆ

ಇತ್ತೀಚೆಗೆ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರೊಂದಿಗೆ ಸಭೆ ನಡೆದಿದ್ದು, ನೇಮಕಾತಿ ಪ್ರಕ್ರಿಯೆ ಕುರಿತು ಚರ್ಚೆಗಳು ನಡೆದಿವೆ. ಆರೋಪಗಳ ಬಗ್ಗೆ ತನಿಖೆ ಜವಾಬ್ದಾರಿಯುತ ಸಾರ್ವಜನಿಕ ರಂಗದ ಕಂಪನಿಯಾಗಿ ನಮ್ಮ ಕರ್ತವ್ಯ. ಹಾಗಾಗಿ ಮುಖ್ಯ ವಿಚಕ್ಷಣಾ ಅಧಿಕಾರಿ ಮೂಲಕ ತನಿಖೆ ನಡೆದು ಅವರು ನೇರವಾಗಿ ಕೇಂದ್ರೀಯ ವಿಚಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net