

ಶ್ರೀರಂಗಪಟ್ಟಣ: ತಾಲೂಕಿನ ಸಬ್ಬನಕುಪ್ಪೆ ಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಸ್ವಗ್ರಾಮದ ಗಿರೀಶ್ ತಮ್ಮ ಹಸುವಿನಿಂದ 33.9 ಕೆ.ಜಿ ಪ್ರಮಾಣದಲ್ಲಿ ಹಾಲು ಕರೆದು ಪ್ರಥಮ ಸ್ಥಾನಗಳಿಸಿ ಪ್ರಶಸ್ತಿ ಸ್ವೀಕರಿಸಿದರು.
ಮಂಡ್ಯಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್), ಜಿಲ್ಲಾ ಪಶುಸಂಗೋಪನ ಇಲಾಖೆ ಹಾಗೂ ಭೈರವೇಶ್ವರ ಗೋಪಾಲಕರ ಸಂಘದ ಸಹಯೋಗದೊಂದಿಗೆ ಸಬ್ಬನಕುಪ್ಪೆ ಹಾಲು ಉತ್ಪಾದಕರ ಸಂಘ ಗ್ರಾಮದ ರಾಣಿ ಐಶ್ವರ್ಯ ಬಿಲ್ಡರ್ಸ್ ಮೈದಾನದಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಬೆಂಗಳೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ವಿವಿಧ ಊರುಗಳಿಂದ ಒಟ್ಟು 10 ಜನ ಗೋ ಪಾಲಕರು ತಮ್ಮ ರಾಸುಗಳೊಂದಿಗೆ ಆಗಮಿಸಿದ್ದರು. ಶನಿವಾರ ಹಾಗೂ ಭಾನುವಾರ ಬೆಳಗ್ಗೆ ಮತ್ತು ಸಂಜೆ ಎರಡು ಪಾಳಿಯಲ್ಲಿ ತಮ್ಮ ರಾಸುಗಳಿಂದ ಪಾಲಕರು ಕರೆದ ಹಾಲಿನ ಪ್ರಮಾಣದಲ್ಲಿ ಹೆಚ್ಚು ಸಾಮರ್ಥ್ಯ ಸಾಧಿಸಿದ ಸಬ್ಬನಕುಪ್ಪೆ ಗ್ರಾಮದ ಗಿರೀಶ್ ಪ್ರಥಮ ಸ್ಥಾನಗಳಿಸಿ 50 ಸಾವಿರ ರೂ. ನಗದು ಜತೆಗೆ ವಿಜಯದ ಪಾರಿತೋಷಕ ಗಳಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಚೆನ್ನೇನಹಳ್ಳಿಯ ಕಿರಣ್ 29.4 ಕೆ.ಜಿ. ಪ್ರಮಾಣದಲ್ಲಿ ಹಾಲು ಕರೆದು 2ನೇ ಸ್ಥಾನಗಳಿಸಿ 40 ಸಾವಿರ ರೂ., ಬನ್ನೂರಿನ ಶ್ರೀಗೌರಿ ಆದಿಶಕ್ತಿ ತಂಡದ ಹೇಮಾದ್ರಿ 27.6 ಕೆ.ಜಿ ಪ್ರಮಾಣದಲ್ಲಿ ಹಾಲು ಕರೆದು 3ನೇ ಸ್ಥಾನದೊಂದಿಗೆ 30 ಸಾವಿರ ರೂ. ಮತ್ತು ಬೆಂಗಳೂರಿನ ಚಾಮರಾಜಪೇಟೆಯ ಪ್ರಸಾದ್ ಮತ್ತು ಜಯರಾಮು 4ನೇ ಸ್ಥಾನಗಳಿಸಿ 20 ಸಾವಿರ ರೂ.ದೊಂದಿಗೆ ಪಾರಿತೋಷಕಗಳನ್ನು ಸ್ವೀಕರಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ಗೋಪಾಲಕರಿಗೆ ಬಿಜೆಪಿ ಯುವಮುಖಂಡ ಸಚ್ಚಿದಾನಂದ, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಹಾಗೂ ಸಬ್ಬನಕುಪ್ಪೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಿರೀಶ್ ಪ್ರಶಸ್ತಿ ವಿತರಿಸಿದರು. ಈ ವೇಳೆ ಗ್ರಾಮದ ಯಜಮಾನ ರಾಮಲಿಂಗೇಗೌಡ, ಸಬ್ಬನಕುಪ್ಪೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.
ಮಲ್ಲೇಶ್, ಮುಖಂಡ ಎಸ್.ಸಿ.ಧನಂಜಯ್ಯ, ಉದ್ಯಮಿ ನಕುಲ್ ಸೇರಿದಂತೆ ಸ್ಪರ್ಧೆಯ ಆಯೋಜಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.