ಎಸ್​ಡಿಎಂಗೆ ಪ್ರಾಜೆಕ್ಟ್​ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Published on

ಬೆಳ್ತಂಗಡಿ: ಮೂಡುಬಿದಿರೆಯ ಎಸ್​.ಎನ್​.ಎಂ ಪಾಲಿಟೆಕ್ನಿಕ್​ ಕಾಲೇಜಿನಲ್ಲಿ ನಡೆದ ನವತ್ವಂ&2024 ಅಂತರ್​ ಕಾಲೇಜು ಪ್ರಾಜೆಕ್ಟ್​ ಸ್ಪರ್ಧೆಯಲ್ಲಿ, ಉಜಿರೆ ಎಸ್​ಡಿಎಂ ಪಾಲಿಟೆಕ್ನಿಕ್​ ಕಾಲೇಜು ಸಿವಿಲ್​ ಮತ್ತು ಮೆಕಾನಿಕಲ್​ ಇಂಜಿನಿಯರಿಂಗ್​ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರಥಮ ಸ್ಥಾನ ಪಡೆದಿದೆ ಎಂದು ಎಸ್​ಡಿಎಂ ಪಾಲಿಟೆಕ್ನಿಕ್​ ಕಾಲೇಜಿನ ಪ್ರಾಂಶುಪಾಲ ಸಂತೋಷ್​ ಹೇಳಿದರು.

ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಂದ 2008ರಲ್ಲಿ ಕಾಲೇಜು ಸ್ಥಾಪನೆಗೊಂಡಿದ್ದು, ಶ್ರೀಧಮಂ ಎಜುಕೇಶನ್​ ಸೊಸೈಟಿಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿದೆ. ಕಾಲೇಜು ನವದೆಹಲಿಯ ಎಐಸಿಟಿಇ ಮಾನ್ಯತೆ ಹಾಗೂ ಬೆಂಗಳೂರು ಡಿಟಿಇಯಿಂದ ಅನುಮೋದನೆಗೆ ಒಳಪಟ್ಟಿದ್ದು, ಪಠ್ಯದ ಜತೆಗೆ ಪಠ್ಯೇತರ ಹಾಗೂ ಪೂರಕ ಚಟುವಟಿಕೆಗಳಲ್ಲೂ ಸಾಧನೆ ಮಾಡುತ್ತಾ ಬಂದಿದ್ದು ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳು ಪ್ರಾಜೆಕ್ಟ್​ ಸ್ಪರ್ಧೆಗಳಲ್ಲಿ ಲಭಿಸಿವೆ ಎಂದರು.

ಸಿವಿಲ್​ ವಿಭಾಗದ ಎಚ್​ಒಡಿ ತೃಪ್ತಿ ರತನ್​ ರೈ, ಉಪನ್ಯಾಸಕರಾದ ಶಿವರಾಜ್​, ಸಾಯಿ ಚರಣ್​, ಪ್ರವಿಣ್​ ಬಿ.ಜಿ, ಕಚೇರಿ ವ್ಯವಸ್ಥಾಪಕ ಚಂದ್ರನಾಥ ಜೈನ್​ ಉಪಸ್ಥಿತರಿದ್ದರು.

ತ್ಯಾಜ್ಯ ಕಾಗದದಿಂದ ಪ್ಲೆವುಡ್​

ಸಿವಿಲ್​ ಇಂಜಿನಿಯರಿಂಗ್​ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಪೇಪರ್​ ಪ್ಲೆವುಡ್​ ಪ್ರಾಜೆಕ್ಟ್​, ಅರಣ್ಯ ನಾಶ ಮತ್ತು ತ್ಯಾಜ್ಯ ಸಂಗ್ರಹಣೆಯ ಅಪಾಯಕ್ಕೆ ಸುಸ್ಥಿರ ಸಂಪನ್ಮೂಲ ಬಳಕೆಯ ನವೀನ ಪರಿಹಾರಗಳನ್ನು ಒದಗಿಸುತ್ತದೆ. ಈ ಯೋಜನೆ ತ್ಯಾಜ್ಯ ಕಾಗದವನ್ನು ಪ್ಲೆವುಡ್​ ಆಗಿ ಪರಿವರ್ತಿಸುವ ಕಾರ್ಯಸಾಧ್ಯತೆ ಪರಿಶೋಧಿಸುತ್ತದೆ. ಸಾಂಪ್ರದಾಯಿಕ ಮರದ ಆಧಾರಿತ ಪ್ಲೆವುಡ್​ ಉತ್ಪಾದನೆಯ ಪರಿಸರ ಪರಿಣಾಮ ಕಡಿಮೆ ಮಾಡುತ್ತದೆ. ಈ ಯೋಜನೆಯು ಕಾಗದ ತಿರುಳನ್ನು ನೈಸರ್ಗಿಕವಾಗಿ ಬೈಂಡರ್​ಗಳೊಂದಿಗೆ ಸಂಯೋಜಿಸುತ್ತದೆ ಹಾಗೂ ರಾಸಾಯನಿಕಮುಕ್ತ ಮತ್ತು ಪರಿಸರ ಸ್ನೇಹಿ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ ಎಂದು ಪ್ರಾಂಶುಪಾಲ ಸಂತೋಷ್​ ತಿಳಿಸಿದರು.

ಮಲ್ಟಿಪರ್ಪಸ್​ ಅಗ್ರಿ ಟ್ರಾಲಿ

ಮೆಕಾನಿಕಲ್​ ಇಂಜಿನಿಯರಿಂಗ್​ ವಿಭಾಗದಲ್ಲಿ ಪ್ರಶಸ್ತಿ ಪಡೆದ "ಮಲ್ಟಿಪರ್ಪಸ್​ ಅಗ್ರಿ ಟ್ರಾಲಿ ವಿನ್ಯಾಸ ಮತ್ತು ತಯಾರಿಕೆ'ಯು ಆಧುನಿಕ ಕೃಷಿ ಪದ್ಧತಿಯಲ್ಲಿ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸುವ ಗುರಿ ಹೊಂದಿದೆ. ಈ ಬೆಳವಣಿಗೆಯಲ್ಲಿ ಒಂದು ಪ್ರಮುಖ ಅಂಶವೆಂದರೆ ರೈತರು ತಮ್ಮ ಕೆಲಸಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವ ಹೊಸ ಉಪಕರಣಗಳ ಅಭಿವೃದ್ಧಿ. ಇದು ಗಾಳಿ ಕಂಪ್ರೆಸರ್​ ವ್ಯವಸ್ಥೆ ಹೊಂದಿದ್ದು, ರೈತರು ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಪರಿಣಾಮಕಾರಿಯಾಗಿ ಸಿಂಪಡಿಸಲು ಮತ್ತು ಅತ್ಯುತ್ತಮ ಕವರೇಜ್​ ಮತ್ತು ಕನಿಷ್ಠ ವ್ಯರ್ಥ ಖಚಿತಪಡಿಸಿಕೊಳ್ಳಲು ಪ್ರೆಷರ್​ ಸೆಟ್ಟಿಂಗ್​ಗಳನ್ನು ಸರಿಹೊಂದಿಸಲು ಸಾಧ್ಯವಾಗಿಸಿ ಸುರತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಎಂದು ಪ್ರಾಂಶುಪಾಲ ಸಂತೋಷ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net