ಪ್ರತಿ ಮನೆಯಿಂದಲೂ ಭಕ್ತರು ಶಿರೂರು ಪರ್ಯಾಯದಲ್ಲಿ ಪಾಲ್ಗೊಳ್ಳಬೇಕು

Shirooru
Published on

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಕರೆ

ಶಿರೂರು ಪರ್ಯಾಯ ಸ್ವಾಗತ ಸಮಿತಿಯ ಪ್ರಥಮ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಮುಂದಿನ ಪರ್ಯಾಯ ಕಾರ್ಯಕ್ರಮಕ್ಕೆ ಪ್ರತಿ ಮನೆಯಿಂದಲೂ ಕೃಷ್ಣ ಭಕ್ತರು ಪಾಲ್ಗೊಂಡು ಸಹಕರಿಸಬೇಕು. ಕೇಂದ್ರ, ರಾಜ್ಯ ಸಚಿವರನ್ನು ಹಾಗೂ ರಾಷ್ಟ್ರ ಮಟ್ಟದ ವಿವಿಧ ನಾಯಕರನ್ನು ಆಮಂತ್ರಿಸಿ ಸಭಾ ಕಾರ್ಯಕ್ರಮ ಆಯೋಜಿಸಿ ಪರ್ಯಾಯಕ್ಕೆ ಹೊಸ ರೂಪ ನೀಡಲಾಗುವುದು ಎಂದು ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಯಶ್​ಪಾಲ್​ ಸುವರ್ಣ ತಿಳಿಸಿದರು.

ಉಡುಪಿ ರಥಬೀದಿಯಲ್ಲಿರುವ ಶ್ರೀಕೃಷ್ಣ ಸಭಾ ಮಂದಿರದಲ್ಲಿ ಆಗಸ್ಟ್​ 2ರಂದು ಸಂಜೆ ಆಯೋಜಿಸಿದ್ದ ಶಿರೂರು ಮಠದ ಪರ್ಯಾಯ ಸ್ವಾಗತ ಸಮಿತಿ ಪದಾಧಿಕಾರಿಗಳ ಪ್ರಥಮ ಸಭೆ ಉದ್ಘಾಟಿಸಿ ಮಾತನಾಡಿದರು.

50 ಲಕ್ಷ ರೂ. ಅನುದಾನ

ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ಶಿರೂರು ಮಠದ ಪರ್ಯಾಯದ ನಿಮಿತ್ತ ನಗರ ಅಲಂಕಾರ, ವಿದ್ಯುತ್​ ಅಲಂಕಾರಕ್ಕೆ 50 ಲಕ್ಷ ರೂ. ಮೀಸಲಿಡಲಾಗಿದೆ. ಮೆರವಣಿಗೆ ಸಹಿತ ಪರ್ಯಾಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.

ಧಾನ್ಯ, ಭತ್ತ ಮುಹೂರ್ತ ಬಾಕಿ

ಶಿರೂರು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿ, 2026ರ ಜ. 18ರಂದು ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರಿಂದ ಶ್ರೀಕೃಷ್ಣನ ಪೂಜೆಗಾಗಿ ಪರ್ಯಾಯ ಪೀಠಾರೋಹಣ ನಡೆಯಲಿದೆ. ಪರ್ಯಾಯ ಪೂರ್ವಭಾವಿ ನಾಲ್ಕು ಮುಹೂರ್ತಗಳಲ್ಲಿ ಬಾಳೆ, ಅಕ್ಕಿ, ಕಟ್ಟಿಗೆ ಮಹೂರ್ತ ಪೂರ್ಣಗೊಂಡಿದೆ. ಧಾನ್ಯ ಹಾಗೂ ಭತ್ತ ಮಹೂರ್ತ ಬಾಕಿಯಿದೆ ಎಂದರು.

ಸಮಿತಿಯ ಕೋಶಾಧಿಕಾರಿ ಜಯಪ್ರಕಾಶ ಕೆದ್ಲಾಯ ಮಾತನಾಡಿ, ಉಡುಪಿ ಶಿರೂರು ಪರ್ಯಾಯದ ಕಾರ್ಯಕ್ರಮಗಳಿಗಾಗಿ 6 ರಿಂದ 7ಕೋಟಿ ರೂ. ಅಗತ್ಯತೆ ಇದೆ ಎಂದರು. ಸಮಿತಿ ಸಂಚಾಲಕ ಬಿ.ಸುಪ್ರಸಾದ್​ ಶೆಟ್ಟಿ ಮಾತನಾಡಿ, ಹೊರೆಗಾಣಿಕೆ ಸಮರ್ಪಣೆಗಾಗಿ ಜಿಲ್ಲೆಯ 243 ಗ್ರಾಮಗಳ ಪ್ರತಿ ಮನೆಯನ್ನೂ ತಲುಪುವ ಗುರಿಯಿದೆ ಎಂದರು.

ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿದರು. ಅಶ್ವತ್ಥ ಭಾರಧ್ವಾಜ ಕಾರ್ಯಕ್ರಮ ನಿರೂಪಿಸಿದರು.

ಈ ಬಾರಿ ಪರ್ಯಾಯದ ಮೆರವಣಿಗೆಯನ್ನು ಕೊಳದಪೇಟೆ, ತೆಂಕಪೇಟೆ ಬದಲು ಕೆ.ಎಂ.ಮಾರ್ಗ, ಕನಕದಾಸ ರಸ್ತೆ ಮೂಲಕ ನಡೆಸಿದರೆ ಹೆಚ್ಚು ಅನುಕೂಲ. ಬೆಳಗ್ಗಿನ ಬದಲು ಪರ್ಯಾಯ ದರ್ಬಾರ್​ ಸಂಜೆ ವೇಳೆ ನಡೆದರೆ ಉತ್ತಮ. | ಬಾಲಾಜಿ ರಾಘವೇಂದ್ರ ಆಚಾರ್ಯ. ಉದ್ಯಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net