

ಮೈಸೂರು: ವಿಧಾನ ಸಭಾ ಚುನಾವಣೆ ಸಂಬಂಧ ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ಸುದ್ದಿಗಾರರೊದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಂಬಂಧ ಪಕ್ಷದಿಂದ ಕೈಗೊಳ್ಳಲಿರುವ ಬಸ್ ಯಾತ್ರೆಗೆ ದಿನಾಂಕ ನಿಗದಿಯಾಗಿಲ್ಲ. ಯಾತ್ರೆ ಆರಂಭಿಸಲು ನಾವೇನು ಜೋತಿಷ್ಯ ನೋಡುವುದಿಲ್ಲ. ಶೂನ್ಯ ಮಾಸದಲ್ಲಿ ಹುಟ್ಟಿದ ಮಕ್ಕಳೆಲ್ಲಾ ಏನ್ ಸತ್ತು ಹೋಗ್ತಾರಾ. ನಮಗೆ ರಾಹುಕಾಲ, ಗುಳಿಕ ಕಾಲ, ಯಮ್ಮಗಂಡ ಕಾಲ ಯಾವುದು ಇಲ್ಲ. ಎಲ್ಲ ಕಾಲವೂ ಒಳ್ಳೆಯದ್ದೇ. ಒಮ್ಮೆ ಕೋಲಾರಕ್ಕೆ ಹೋಗಿ ಬಸ್ ಪರೀಕ್ಷೆ ನಡೆಸಿದ್ದೇನೆ. ನಾನೊಂದು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ತಂಡವಾಗಿ ಪ್ರಚಾರ ಮಾಡುತ್ತೇವೆ ಎಂದರು.
ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ. ಯಾರನ್ನು ಬಲವಂತವಾಗಿ ಮತಾಂತರ ಮಾಡಕೂಡದು. ಯಾರು ಯಾವ ಧರ್ಮ ಬೇಕಾದರೂ ಅನುಸರಿಸಬಹುದು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪರವಾಗಿದ್ದೇವೆ ಎಂದು ಪ್ರತಿಕ್ರಿಯಿಸಿದರು.