

ವಿಜಯಪುರ: ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಬಿಜೆಪಿಯ ಕಾರ್ಯಕ್ರವನ್ನಾಗಿಸಿದ ಸಂಸದ ರಮೇಶ ಜಿಗಜಿಣಗಿ ನಡೆಯನ್ನು ಕಾಂಗ್ರೆಸ್ ಮಾಜಿ ಶಾಸಕ ರಾಜು ಆಲಗೂರ ಖಂಡಿಸಿದ್ದಾರೆ.
ಹೊನಗನಹಳ್ಳಿ ಹತ್ತಿರ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿಸದೆ ಬಿಜೆಪಿಯ ಪ್ರಚಾರದ ಕಾರ್ಯಕ್ರಮವನ್ನಾಗಿಸಲಾಗಿದೆ. ಯಾವುದೇ ಅಧಿಕಾರಿ ಇಲ್ಲದೇ ಕೇವಲ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಬಳಸಿಕೊಂಡು ಮಾಡಿರುವುದು ಖಂಡನೀಯ ಎಂದಿದ್ದಾರೆ.
ಹೊನಗನಹಳ್ಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಎಂದೋ ಮುಗಿಯಬೇಕಿತ್ತು. ವಿಳಂಬವಾಗಿ ಇದೀಗ ಪೂರ್ಣಗೊಂಡಿದ್ದು, ಈ ಕಾರ್ಯವನ್ನು ಸಂಸದ ರಮೇಶ ಜಿಗಜಿಣಗಿಯವರು ತಮ್ಮ ಜೀವಮಾನದ ಶ್ರೇಷ್ಠ ಸಾಧನೆ ಎಂದು ತಿಳಿದುಕೊಂಡಂತಿದೆ. ಏಕೆಂದರೆ ತಾವು ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಅಭಿವೃದ್ಧಿ ವಿಷಯದಲ್ಲಿ ಅವರ ಕೊಡುಗೆ ಶೂನ್ಯ. ಹೆದ್ದಾರಿ ಪ್ರಾಧಿಕಾರದ ವಾರ್ಷಿಕ ಕಾರ್ಯಕ್ರಮಗಳಲ್ಲಿ ಸೇರ್ಪಡೆಯಾಗಿದ್ದ ಆರ್‌ಒಬಿಯನ್ನು ಸ್ವತಃ ತಾವೇ ಮಾಡಿದ್ದು ಎಂದು ಬಿಂಬಿಸಿಕೊಂಡು ಪೋಸ್ ಕೊಟ್ಟು ಉದ್ಘಾಟನೆ ಮಾಡಿದ್ದಾರೆ. ಅಧೀಕೃತ ಆಹ್ವಾನ ಪತ್ರಿಕೆ ಇಲ್ಲದೆ, ತಮ್ಮದೆ ಪಕ್ಷದ ಮಾಜಿ ಶಾಸಕರನ್ನು ಕರೆದುಕೊಂಡು ಉದ್ಘಾಟನೆ ಮಾಡಿದ್ದಾರೆ ಎಂದು ಆಲಗೂರ ಟೀಕಿಸಿದ್ದಾರೆ.
ಹೊನಗನಹಳ್ಳಿ ಗ್ರಾಮ ಮುಖ್ಯವಾಗಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ಆ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಕನಿಷ್ಠ ಈ ವಿಷಯವನ್ನು ಅವರ ಗಮನಕ್ಕೆ ತಂದು, ಆಹ್ವಾನಿಸಿ ಉದ್ಘಾಟನೆ ಮಾಡಬೇಕೆಂಬ ಸೌಜನ್ಯತೆಯೂ ಇಲ್ಲ. ಮಾತೆತ್ತಿದರೆ ಸೌಜನ್ಯಯುತ ರಾಜಕಾರಣಿ ಎಂದು ಪೋಸ್ ಕೊಡುವ ರಮೇಶ ಜಿಗಜಿಣಗಿಯವರು ಇಂಥಹ ಇಳಿಯ ವಯಸ್ಸಿನಲ್ಲಿ ಚಿಲ್ಲರೆ ಕೆಲಸಗಳ ಮೂಲಕ ತಮ್ಮ ನೈತಿಕತೆಯ ದಿವಾಳಿತನಕ್ಕೆ ಸಾಕ್ಷಿಯಾಗಿದ್ದಾರೆ. ಇಷ್ಟು ವರ್ಷ ಇವರು ಸಂಸದರಾಗಿದ್ದು ಒಂದೇ ಒಂದು ರೈಲ್ವೆ ಬೆಂಗಳೂರಿಗೆ ಬಿಡುವುದಕ್ಕೆ ಆಗಿಲ್ಲ. ಮೊದಲು ರೈಲು ಬಿಡಿ, ಆಮೇಲೆ ನಿಮ್ಮ ರೀಲು ಬಿಡಿ ಎಂದು ರಾಜು ಆಲಗೂರ ಕಿಡಿಕಾರಿದ್ದಾರೆ.