ಪ್ರಥಮ ಭಾಷೆಗೂ 2,574 ವಿದ್ಯಾರ್ಥಿಗಳು ಗೈರು

2CKD2_Web
ನಿಪ್ಪಾಣಿ ನಗರದ ಕನ್ಯಾ ಶಾಲೆಯಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಭೇಟಿ ನೀಡಿ ಕೈಗೊಂಡ ಸಿದ್ಧತೆ ಪರಿಶೀಲಿಸಿದರು. ಬಿಇಒ ರೇವತಿ ಮಠದ ಇತರರು ಇದ್ದರು.
Published on

ಬೆಳಗಾವಿ/ಚಿಕ್ಕೋಡಿ: ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆಗಳಾದ ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ ಭಾಷೆ ವಿಷಯದ ಪರೀಕ್ಷೆಗಳು ಸುಸೂತ್ರವಾಗಿ ನಡೆದವು. ಎರಡೂ ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿ ಪರೀಕ್ಷಾ ಅಕ್ರಮದಿಂದ ಡಿಬಾರ್ ಆಗಿಲ್ಲ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 31,651 ವಿದ್ಯಾರ್ಥಿಗಳ ಪೈಕಿ 30,877 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 774 ವಿದ್ಯಾರ್ಥಿಗಳು ಗೈರಾಗಿದ್ದರು. ಇಬ್ಬರು ವಿದ್ಯಾರ್ಥಿಗಳು ಅನಾರೋಗ್ಯ ಕಾರಣದಿಂದಾಗಿ ಹಚ್ಚಿನ ನಿಗಾದೊಂದಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಬೆಳಗಾವಿ ಡಿಡಿಪಿಐ ಎ.ಬಿ. ಪುಂಡಲೀಕ ಮಾಹಿತಿ ನೀಡಿದ್ದಾರೆ.

38,637 ವಿದ್ಯಾರ್ಥಿಗಳು ಹಾಜರ್: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಭಾಷೆ ಪರೀಕ್ಷೆಗೆ 40,437 ವಿದ್ಯಾರ್ಥಿಗಳ ಪೈಕಿ 38,637 ವಿದ್ಯಾರ್ಥಿಗಳು ಹಾಜರಾಗಿದ್ದು, 1,800 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ ತಿಳಿಸಿದ್ದಾರೆ.

ಚಿಕ್ಕೋಡಿ ಜಿಲ್ಲೆಯಲ್ಲಿ ಎಂಟು ವಲಯಗಳಿದ್ದು ಅಥಣಿ-162, ಕಾಗವಾಡ-52, ಚಿಕ್ಕೋಡಿ-382, ನಿಪ್ಪಾಣಿ-129, ಗೋಕಾಕ-120, ಮೂಡಲಗಿ-258, ಹುಕ್ಕೇರಿ-195, ರಾಯಬಾಗ-502 ಸೇರಿ ಒಟ್ಟು 1800 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಂಟೇನ್ಮೆಂಟ್ ಪ್ರದೇಶಗಳಿಂದ 22 ವಿದ್ಯಾರ್ಥಿಗಳು ಹಾಗೂ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದಿಂದ 51 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net