ಪ್ರಥಮ ಗ್ರೀನ್ ಕಾರಿಡಾರ್

h6-Unkal 3
Published on

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ದೇಶದಲ್ಲಿಯೇ ಪ್ರಥಮವಾದ ಗ್ರೀನ್ ಮೊಬಿಲಿಟಿ ಕಾರಿಡಾರ್​ಗೆ ಭಾನುವಾರ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಯಿತು. 8 ಕೋಟಿ ರೂ. ವೆಚ್ಚದಲ್ಲಿ ನಾಲಾ ಸುತ್ತಮುತ್ತ ಸಹ್ಯವಾದ ಪರಿಸರ ಸೃಷ್ಟಿಸುವುದು ಇದರ ಉದ್ದೇಶವಾಗಿದೆ.

ಉಣಕಲ್ ಕೆರೆ ಕೋಡಿ ಹರಿಯುವ ಸ್ಥಳದಿಂದ ದೇವಿನಗರ ಸೇತುವೆವರೆಗೆ 680 ಮೀಟರ್ ಉದ್ದ ನಾಲಾ ಅಕ್ಕ ಪಕ್ಕ ಫುಟಪಾತ್, ಸೈಕಲ್ ಪಾತ್, ಗಾರ್ಡನ್ ನಿರ್ವಣವಾಗಲಿದೆ. ನಾಲಾ ಎರಡು ಬದಿ ಪಕ್ಕಾ ತಡೆಗೋಡೆ ಬರಲಿದೆ. ನಾಲಾ ಆಳವನ್ನು 7-8 ಅಡಿ ಕಾಯ್ದುಕೊಳ್ಳಲಾಗುವುದು. ಗ್ರೀನ್ ಕಾರಿಡಾರ್ ಅಗಲ 21 ಮೀಟರ್ ಇರಲಿದೆ.

ಮೂಲತಃ 130 ಕೋ. ವೆಚ್ಚದ ಕಾಮಗಾರಿ ಇದಾಗಿತ್ತು. ಉಣಕಲ್ ಕೆರೆಯಿಂದ ಗಬ್ಬೂರಿನವರೆಗೆ ಹಾದು ಹೋಗಿರುವ 10.5 ಕಿ.ಮೀ. ಉದ್ದದ ನಾಲಾ ದಂಡೆಯಲ್ಲಿ ಗ್ರೀನ್ ಮೊಬಿಲಿಟಿ ಕಾರಿಡಾರ್ ನಿರ್ವಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗಿದೆ. ಆದರೆ, ಇದೀಗ ಮಾದರಿ(ಪೈಲಟ್)ಯಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಇದರ ಸಾಧಕ-ಬಾಧಕ, ಸಾರ್ವಜನಿಕ ಅಭಿಪ್ರಾಯವನ್ನು ಆಧರಿಸಿ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಬದ್ಧವಾಗಿದೆ.

ಸಮಗ್ರ ಕ್ರೀಡಾ ಸಮುಚ್ಚಯ: ಯೋಜನೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಣಕಲ್ ಕೆರೆಯಲ್ಲಿ ಜಲಕ್ರೀಡೆ, ಕ್ರೀಡಾ ಶಾಲೆ ಒಳಗೊಂಡ ಪೂರ್ಣ ಪ್ರಮಾಣದ ಸಂಯೋಜಿತ ಕ್ರೀಡಾ ಸಮುಚ್ಚಯ ನಿರ್ವಿುಸಲಾಗುವುದು. ಇದರ ಯೋಜನೆ ಹಾಗೂ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಹು-ಧಾ ಸ್ಮಾರ್ಟ್ ಸಿಟಿ ಎಂಡಿ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸದ್ಯದಲ್ಲೇ ಇದರ ಪ್ರಾತ್ಯಕ್ಷಿಕೆ ನೀಡಲಿದ್ದಾರೆ ಎಂದು ಹೇಳಿದರು.

ಸಿಟಿಸ್ ಚಾಲೆಂಜ್ ಪ್ರಾಜೆಕ್ಟ್ ಅಡಿ 680 ಮೀ. ಗ್ರೀನ್ ಮೊಬಿಲಿಟಿ ಕಾರಿಡಾರ್ ನಿರ್ವಿುಸಲಾಗುತ್ತಿದೆ. ನಾಲಾಕ್ಕೆ ಸುಸಜ್ಜಿತ ತಡೆಗೋಡೆ, ಸೈಕಲ್ ಪಾಥ್, ಹಸಿರು ಪರಿಸರ ಬರಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆ ಜಾರಿಯಲ್ಲಿ ಹು-ಧಾ ಅವಳಿ ನಗರ ರಾಜ್ಯಕ್ಕೆ ಪ್ರಥಮ ಹಾಗೂ ದೇಶದಲ್ಲಿ 13ನೇ ಸ್ಥಾನದಲ್ಲಿದೆ. ಇದೇ ರೀತಿ ಕಾಮಗಾರಿಗಳು ತ್ವರಿತವಾಗಿ ನಡೆದು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು ಎಂದರು.

ಹುಬ್ಬಳ್ಳಿ ಗೋಕುಲ ರಸ್ತೆ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಂಕಾಪುರ ಚೌಕ ಇಂದಿರಾನಗರದವರೆಗೆ 2 ಪ್ಯಾಕೇಜ್​ಗಳಲ್ಲಿ 92.94 ಕೋ. ವೆಚ್ಚದಲ್ಲಿ ಸ್ಮಾರ್ಟ್ ರಸ್ತೆ ನಿರ್ವಣಕ್ಕೆ, 5 ಕೋ. ವೆಚ್ಚದಲ್ಲಿ ಈಜುಗೊಳದ ದ್ವೀತಿಯ ಹಂತದ ಕಾಮಗಾರಿ ಭೂಮಿಪೂಜೆ ನೆರವೇರಿಸಲಾಯಿತು. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಮಹಾನಗರ ಪಾಲಿಕೆಗೆ ನೀಡಲಾದ 2 ಜೆಟ್ಟಿಂಗ್ ವಾಹನಗಳಿಗೆ ಚಾಲನೆ ನೀಡಲಾಯಿತು.

ಕೆಯುಐಡಿಎಫ್​ಸಿ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಎಸ್.ಐ. ಚಿಕ್ಕನಗೌಡ್ರ, ಶಾಸಕ ಅರವಿಂದ ಬೆಲ್ಲದ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಸ್ಮಾರ್ಟ್ ಸಿಟಿ ಎಂಡಿ ಶಕೀಲ ಅಹ್ಮದ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net