

ಶಿವಮೊಗ್ಗ: ಮಿತಿಗಿಂತಲೂ ವೇಗವಾಗಿ ಬೈಕ್ ಚಲಾಯಿಸಿದ್ದ ಚಾಲಕನ ವಿರುದ್ಧ ಶಿವಮೊಗ್ಗ ನಗರದಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ.
ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಡಿಕೊಪ್ಪದ ಸೇತುವೆ ಸಮೀಪ ಬೈಕ್ ಒಂದು 83 ಕಿ.ಮೀ ವೇಗದಲ್ಲಿ ಸಂಚರಿಸಿದೆ. ಅಲ್ಲದೆ ಬೈಕ್‌ನಲ್ಲಿ ಸವಾರ ಸೇರಿ ಮೂರು ಸಂಚರಿಸುತ್ತಿದ್ದರು. ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಸಮೀಪ ಇರುವ ಸ್ಮಾರ್ಟ್‌ಸಿಟಿ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು.
ಗಾಡಿಕೊಪ್ಪ ಸೇತುವೆಯಿಂದ ಹೆಲಿಪ್ಯಾಡ್ ವೃತ್ತ, ಬಸ್ ಸ್ಟಾಂಡ್, ಅಮೀರ್ ಅಹಮದ್ ಸರ್ಕಲ್‌ವರೆಗೆ ದ್ವಿಚಕ್ರ ವಾಹನಗಳಿಗೆ 30 ಕಿ.ಮೀ. ವೇಗಮಿತಿ ಇದೆ. ಇತರೆ ವಾಹನಗಳಿಗೆ 40 ಕಿ.ಮೀ. ವೇಗಮಿತಿ ಇದೆ. ಈ ನಿಯಮ ಉಲ್ಲಂಘಿಸಿದ್ದಕ್ಕೆ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ.
ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಪ್ರವೀಣ್ ಪಾಟೀಲ್ ತ್ರಿಬಲ್ ರೈಡಿಂಗ್, ವೇಗ ಮಿತಿ ಉಲ್ಲಂಘನೆಯನ್ನು ಸಿಸಿಟಿವಿ ಪರಿಶೀಲಿಸಿ ಪತ್ತೆ ಹಚ್ಚಿದ್ದರು.