

ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತು ಪ್ರಪ್ರಥಮ ಬಾರಿಗೆ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪಕ್ಕದ ಆಂಧ್ರ ಪ್ರದೇಶದ ಮಂತ್ರಾಲಯದಲ್ಲಿ ಆ.22 ರಂದು ಆಯೋಜಿಸಿದ್ದು , ಆದರೆ ಜಿಲ್ಲೆಯ ಕಸಪಾ ಪದಾಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದೆ ಇರುವುದರಿಂದ ನಾನಾ ಗೊಂದಲ ,ಅಸಮಾಧಾನಗಳನ್ನು ಹುಟ್ಟು ಹಾಕಿದೆ.
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಹಾಗೂ ಚಿಕ್ಕಮಗಳೂರು ಜಿಲ್ಲೆ ಸಂಯುಕ್ತಾಶ್ರಯದಲ್ಲಿ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಆದರೆ ಗಡಿ ಜಿಲ್ಲೆಗಲ ಪದಾಧಿಕಾರಿಗಳಿಗೆ ಮಾತ್ರ ಯಾವುದೇ ಮಾಹಿತಿ ನೀಡದೆ ಇರುವುದರಿಂದ ರಾಯಚೂರು, ಬಳ್ಳಾರಿ ಜಿಲ್ಲಾ ತಾಲೂಕು ಘಟಕಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮಂತ್ರಾಲಯಕ್ಕೆ ಅಂಟಿಕೊಂಡಿರುವ ರಾಯಚೂರು ,ಬಳ್ಳಾರಿ ಜಿಲ್ಲೆಗಳನ್ನು ಕನಿಷ್ಠ ಗಣನೆಗೂ ತೆಗೆದುಕೊಳ್ಳದೆ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಸ್ ಜೋಶಿ ನಡೆ ಗಡಿನಾಡು ಜಿಲ್ಲೆಗಳ ಸಾಹಿತ್ಯಾಸಕ್ತರಲ್ಲಿ ಅಚ್ಚರಿ ಮೂಡಿಸಿದೆ.
ಏನೀದು ಸಾಹಿತ್ಯ ಸಮ್ಮೇಳನ ?
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಗಡಿಭಾಗದ ಕನ್ನಡಿಗರ ಸಮಸ್ಯೆಗಳು, ಕನ್ನಡ ಶಾಲೆಗಳ ಪರಿಸ್ಥಿತಿ, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿ ಅದಕ್ಕೊಂದು ಪರಿಹಾರ ಕಲ್ಪಿಸುವ ಕೆಲಸ ಇಂಥ ಸಮ್ಮೇಳನಗಳಿಂದ ಆಗಬೇಕಿದೆ. ಆದರೆ ಮೂಲಸತ್ವ ಬಿಟ್ಟು ಬರೀ ಆಡಂಬರದ ಆಚರಣೆಗೆ ಮೊದಲ ಅಂತಾರಾಜ್ಯ ಸಮ್ಮೇಳನ ಸೀಮಿತವಾಗುತ್ತಿದೆಯೇ ಎಂಬ ಪ್ರಶ್ನೆ ಸಾಹಿತ್ಯಾಸಕ್ತರಲ್ಲಿ ಕೇಳಿ ಬಂದಿದ್ದು, ಬಳ್ಳಾರಿ, ರಾಯಚೂರು ಗಡಿನಾಡು ಜಿಲ್ಲೆಗಳಲ್ಲಿ ಸಾಕಷ್ಟು ಭಾಷಾ ಸಮಸ್ಯೆಗಳು ಇರುವಾಗ , ಗಡಿ ನಾಡು ಕನ್ನಡಿಗರ ಕುರಿತ ಚರ್ಚೆಗಾದರೂ ಜಿಲ್ಲೆಗಳನ್ನು ಪರಿಗಣಿಸಬೇಕಿತ್ತು.
ಸಮ್ಮೇಳನದಲ್ಲಿ ಮೊದಲನೇ ಗೋಷ್ಠಿ ಗಡಿನಾಡು ಕನ್ನಡಿಗರ ಕೊಡುಗೆ, ಎರಡನೆಯದು ಗಮಕ ಗೋಷ್ಠಿ , ಮೂರನೆಯದು ಬಹುಭಾಷಾ ಕವಿಗೋಷ್ಠಿ ಆಯೋಜಸಲಾಗಿದೆ. ಬಹುತೇಕ ಹೊರ ರಾಜ್ಯದವರು, ಬೆಂಗಳೂರು ಭಾಗದವರಿಗೆ ಅವಕಾಶ ನೀಡಲಾಗಿದೆ. ಹಾಗಿದ್ದರೆ ರಾಯಚೂರು, ಬಳ್ಳಾರಿ, ಯಾದಗಿರಿ, ಬೀದರ್ ಜಿಲ್ಲೆಗಳ ಗಡಿ ಸಮಸ್ಯೆಗಳನ್ನು ಯಾರು ಹೇಳಬೇಕು ಎಂಬ ಪ್ರಶ್ನೆ ಮೂಡಿದೆ. ಇನ್ನು 30ಕ್ಕೂ ಅಧಿಕ ಜನರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಲಾಗುತ್ತಿದೆ. ಅದರಲ್ಲೂ ಸ್ಥಳೀಯರಿಗೆ ಆದ್ಯತೆ ಸಿಕ್ಕಿಲ್ಲವೆಂದು ಸ್ಥಳೀಯರಲ್ಲಿ ಅಸಮಾಧಾನ ಭುಗಿಲ್ಲೇದ್ದಿದೆ.
ಜಿಲ್ಲಾ ಕಸಾಪದ ಪದಾಧಿಕಾರಿಗಳಿಲ್ಲ ಆಹ್ವಾನ
ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅಧಿಕಾರಕ್ಕೆ ಬಂದ ಬಳಿಕ ಏನಾದರು ಒಂದು ಪ್ರಯೋಗ ಮಾಡುತ್ತ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ. ಈಗ ತಮ್ಮದೇ ಪರಿಷತ್ ಸದಸ್ಯರ ಗಮನಕ್ಕಿಲ್ಲದೇ ಯಾಕೆ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ ಎಂಬ ಶಂಕೆ ಮೂಡಿದೆ. ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕೆ ರಾಯಚೂರು ,ಬಳ್ಳಾರಿ ಕಸಾಪ ಜಿಲ್ಲಾಧ್ಯಕ್ಷರ ಹೆಸರು ಮುದ್ರಿಸಿರುವುದು ಬಿಟ್ಟರೆ ಬೇರೆ ಯಾವುದೇ ಪದಾಧಿಕಾರಿಗಳ ಹೆಸರುಗಳು ಹಾಕಿಲ್ಲ. ಕನಿಷ್ಠ ಗಡಿ ಜಿಲ್ಲೆಗಳಿಂದ ಕನ್ನಡ ಪ್ರೇಮಿಗಳು ಸಮ್ಮೇಳನಕ್ಕೆ ಬರಲಿ ಅಂತಾದರು ಆಹ್ವಾನ ನೀಡದಿರುವುದು ವಿಪರ್ಯಾಸ. ಅಷ್ಟೇ ಅಲ್ಲಾ ಪಕ್ಕದ ಮಂತ್ರಾಲಯದಲ್ಲಿ ಪ್ರಪ್ರಥಮ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರು ಕನ್ನಡ ಅಭಿಮಾನಿಗಳಿಗೆ, ಸಾಹಿತ್ಯಾಸಕ್ತರಿಗೆ ಮಾಹಿತಿಯಿಲ್ಲದೆ ಇರುವುದು ರಾಯಚೂರು, ಬಳ್ಳಾರಿ ಜಿಲ್ಲೆಗಳ ಪರಿಷತ್ ಸದಸ್ಯರ, ಸಾಹಿತ್ಯಾಸಕ್ತರ ಬೇಸರಕ್ಕೂ ಕಾರಣವಾಗುತ್ತಿದೆ.
ಸಹಕಾರ ಸಂಘಗಳ ನಿಬಂಧಕರಿಗೆ ದೂರು ಮಂತ್ರಾಲಯದಲ್ಲಿ ನಡೆಯುವ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿ ಭಾಗದ ಜಿಲ್ಲೆಗಳ ಜಿಲ್ಲಾಧ್ಯಕ್ಷರಿಗೆ ಯಾವುದೇ ಮಾಹಿತಿ ಇಲ್ಲ. ಚಿಕ್ಕಮಂಗಳೂರು ಹಾಗೂ ಮಂತ್ರಾಲಯಕ್ಕೆ ಏನು ಸಂಬಂಧ ? ಕರ್ನಾಟಕ ಗಡಿ ಭಾಗದಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರೆ ಸಂಬಂಧಪಟ್ಟ ಗಡಿ ಭಾಗದ ಜಿಲ್ಲಾಧ್ಯಕ್ಷರು ನಿರ್ವಹಣೆ ಮಾಡಬೇಕು. ಆದರೆ ಚಿಕ್ಕ ಮಂಗಳೂರು ಕಸಾಪ ಜಿಲ್ಲಾಧ್ಯಕ್ಷ ಕಾರ್ಯಕ್ರಮದ ಮುಂಚೂಣಿಯನ್ನು ತೆಗೆದುಕೊಂಡಿದ್ದಾರೆಂದು ಆರೋಪಿಸಿ ಆನಂತಪುರದ ಕನ್ನಡ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕುಣೆ ಬಾಲರಾಜ ಅವರಿಂದ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಿದ್ದಾರೆ.
ಮಂತ್ರಾಲಯದಲ್ಲಿ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆ.22 ರಂದು ಆಯೋಜನೆ ಮಾಡಲಾಗಿರುವ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ಕೇಂದ್ರ ಸಮಿತಿಗೆ ಕೇಳಿದರೆ, ಸಮ್ಮೇಳನಕ್ಕೂ ನಮಗು ಯಾವುದೇ ಸಂಬಂಧವಿಲ್ಲವೆಂದು ಹೇಳುತ್ತಿದ್ದಾರೆ. ಆನಂತಪುರದಿಂದ ಸಹಕಾರ ಸಂಘಗಳ ನಿಬಂಧಕರಿಗೆ ಕಾರ್ಯಕ್ರಮದ ಕುರಿತು ದೂರು ಸಲ್ಲಿಸಿದ್ದಾರೆ. ನಾವು ಸಹ ಒಂದು ದೂರು ಸಲ್ಲಿಸಲಾಗುತ್ತದೆ. ರಂಗಣ್ಣ ಪಾಟೀಲ್ ಅಳ್ಳುಂಡಿ ಜಿಲ್ಲಾಧ್ಯಕ್ಷ ಕಸಾಪ ರಾಯಚೂರು.