ಜ.19ರಿಂದ 21ರವರೆಗೆ ಉದ್ಯಮಿ ಒಕ್ಕಲಿಗ ಸಮಾವೇಶ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆ

First Circle Society Press Conference mandya
Published on

ಮಂಡ್ಯ: ಫಸ್ಟ್ ಸರ್ಕಲ್ ಸೊಸೈಟಿಯಿಂದ ಜ.19ರಿಂದ 21ರವರೆಗೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರಾೃಂಡ್ ಪೆವಿಲಿಯನ್‌ನಲ್ಲಿ ಉದ್ಯಮಿ ಒಕ್ಕಲಿಗ ಸಮಾವೇಶ ಆಯೋಜಿಸಲಾಗಿದೆ ಎಂದು ಸರ್ಕಲ್‌ನ ರಾಜಕೀಯ ವಿಭಾಗದ ಮುಖ್ಯಸ್ಥೆ ಡಾ.ಸೌಮ್ಯ ರಮೇಶ್ ತಿಳಿಸಿದರು.

ಸಮಾವೇಶದಲ್ಲಿ ನೂರಕ್ಕೂ ಹೆಚ್ಚು ಒಕ್ಕಲಿಗ ಉದ್ಯಮದಾರರು ತಮ್ಮ ಸೇವೆ ಮತ್ತು ಸರಕುಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಮಾತ್ರವಲ್ಲದೆ 12 ಉದ್ಯಮ ಕ್ಷೇತ್ರದ ಬಗ್ಗೆ ಚಿಂತನಾ-ಮಂಥನ ನಡೆಯಲಿದೆ. ಕೃಷಿ, ಆರೋಗ್ಯ, ಶಿಕ್ಷಣ, ಎಂಎಸ್‌ಎಂಇ, ಮನರಂಜನೆ, ಸ್ಟಾರ್ಟ್ ಅಪ್, ಆಹಾರ-ಆತಿಥ್ಯ ಸೇರಿದಂತೆ ಎಲ್ಲ ಕ್ಷೇತ್ರದ ಬಗ್ಗೆ ವಿಸ್ತೃತ ಚರ್ಚೆ ಇರಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಶೇಷವಾಗಿ ಸಮಾವೇಶದಲ್ಲಿ ಒಕ್ಕಲಿಗ ಆಹಾರ ಪದ್ಧತಿ ಪ್ರಮುಖ ಆಕರ್ಷಣೆಯಾಗಲಿದೆ. 12ಕ್ಕೂ ಹೆಚ್ಚು ಒಕ್ಕಲಿಗ ಖಾದ್ಯ ತಯಾರಕರು ತಮ್ಮ ತಿನಿಸುಗಳನ್ನು ಬಡಿಸಲಿದ್ದಾರೆ. ಅಂತೆಯೇ ತಮಿಳುನಾಡಿನಲ್ಲಿ 25 ಲಕ್ಷಕ್ಕೂ ಹೆಚ್ಚಿರುವ ಒಕ್ಕಲಿಗ ಸಮುದಾಯದ 500ಕ್ಕೂ ಹೆಚ್ಚು ಉದ್ಯಮಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಚೆನ್ನೈ, ಕೊಯಮತ್ತೂರು, ಕೃಷ್ಣಗಿರಿ, ಹೊಸೂರು, ಥೇಣಿ, ಕಂಬಂ ಜಿಲ್ಲೆಗಳಿಂದ ಆಗಮಿಸಲಿದ್ದಾರೆ. ಕರ್ನಾಟಕ-ತಮಿಳುನಾಡು ಒಕ್ಕಲಿಗ ಉದ್ಯಮಿಗಳ ಸಮನ್ವಯಕ್ಕಾಗಿ ಪ್ರತ್ಯೇಕ ಚರ್ಚೆ ಹಾಗೂ ಸಮನ್ವಯ ಸಮಿತಿ ಆಯೋಜಿಸಲಾಗುತ್ತಿದೆ. ಮೂರು ದಿನದ ಸಮಾವೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಗಂಗವಾಡಿ-96000 ರಾಜವಂಶದ ಲಾಂಛನವನ್ನು ಸಮಾವೇಶದ ಕೇಂದ್ರ ಆಕರ್ಷಣೆಯಾಗಿ ಬಳಸಲಾಗುತ್ತಿದೆ. ಒಕ್ಕಲಿಗ ವ್ಯಾಪಾರಿಗಳ ಡಿಜಿಟಲ್ ಮಾರುಕಟ್ಟೆ FCBUY.IN ಹಾಗೂ ಒಕ್ಕಲಿಗ ಉದ್ಯಮಿಗಳ ಜಾಲತಾಣ FCNEXT.IN ಲೋಕಾರ್ಪಣೆಯಾಗಲಿದೆ ಎಂದು ವಿವರಿಸಿದರು.

19ರಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಮಾವೇಶ ಉದ್ಘಾಟಿಸಲಿದ್ದಾರೆ. ಅಂತೆಯೇ ಒಕ್ಕಲಿಗ ಸಂಸ್ಕೃತಿಯ ಪರಿಚಯದ ಅಂಗವಾಗಿ ‘ದೇವಿ ಮಹಾತ್ಮೆ’ ಎಂಬ ಮೂಡಲಪಾಯ ಯಕ್ಷಗಾನ ಪ್ರದರ್ಶನವಿರಲಿದೆ. 21ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net