ಮೊಟ್ಟಮೊದಲ ಮೂಳೆ ಅಂಗಾಂಗ ದಾನ : ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಯಶಸ್ವಿ ಪ್ರಯತ್ನ

New Project (28)
Published on

ಉಳ್ಳಾಲ: ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮೂಳೆದಾನ ಪ್ರಕ್ರಿಯೆ ನಡೆದಿದ್ದು, ಕರ್ನಾಟಕದಲ್ಲಿ ಪ್ರಪ್ರಥಮ ಯಶಸ್ವಿ ಪ್ರಯತ್ನ ಇದಾಗಿದೆ.

ಸೋಮವಾರಪೇಟೆಯ ಜಂಬೂರು ಗ್ರಾಮದ ನಿವಾಸಿ 32 ವರ್ಷದ ಈಶ್ವರ ಎನ್. ಎಂಬುವರು ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದರು. ಈಶ್ವರ ಅವರ ಅಂಗಗಳನ್ನು ದಾನ ಮಾಡಲು ಅವರ ಸಹೋದರಿ ನಿರ್ಧಾರ ಕೈಗೊಂಡು ಆಸ್ಪತ್ರೆ ವೈದ್ಯರಿಗೆ ತಿಳಿಸಿದ್ದರು. ಅಂಗಾಂಗ ಸಂಯೋಜಕಿ ಅಕ್ಷತಾ ಶೆಟ್ಟಿ, ನರಶಸ್ತ್ರ ಚಿಕಿತ್ಸಕರ ಸಹಿತ ವೈದ್ಯಕೀಯ ತಂಡ ಸಮಾಲೋಚನೆ ನಡೆಸಿ ಮೂಳೆಗಳನ್ನು ಕಸಿ ಮಾಡಲು ಒಪ್ಪಿದ್ದು, ಈಶ್ವರ ಅವರ ಸಹೋದರಿ ದಾನಕ್ಕೆ ಒಪ್ಪಿಗೆ ನೀಡಿದರು. ಇದು ಮೆಡಿಕೋ-ಲೀಗಲ್ ಪ್ರಕರಣವಾಗಿರುವುದರಿಂದ ದಾನ ಪ್ರಕ್ರಿಯೆ ಮುಂದುವರಿಸುವ ಮೊದಲು ಪೊಲೀಸರು ಮತ್ತು ಈಶ್ವರ ಅವರ ಹತ್ತಿರದ ಸಂಬಂಧಿಕರಿಂದ ಅಗತ್ಯ ಅನುಮತಿಗಳನ್ನು ಪಡೆಯಲಾಯಿತು.

ಆರ್ಥೋಪೆಡಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ವಿಕ್ರಂ ಶೆಟ್ಟಿ ನೇತೃತ್ವದಲ್ಲಿ ಟಿಶ್ಯೂ ಬ್ಯಾಂಕ್‌ನ ಸ್ಥಾಪಕ ವೈದ್ಯಕೀಯ ನಿರ್ದೇಶಕ ಪ್ರೊ.ಎಂ.ಶಾಂತಾರಾಮ ಶೆಟ್ಟಿ ಅವರನ್ನೊಳಗೊಂಡ ಶಸ್ತ್ರಚಿಕಿತ್ಸಾ ತಂಡ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಥಿಯೇಟರ್‌ನಲ್ಲಿ ಮೂಳೆ ತೆಗೆಯುವಿಕೆಯ ಪ್ರಕ್ರಿಯೆ ನಡೆಸಿದರು.

ಡಾ.ವಿಕ್ರಂ ಶೆಟ್ಟಿ ಅವರಿಗೆ ಟಿಶ್ಯೂ ಬ್ಯಾಂಕ್‌ನ ವೈದ್ಯಕೀಯ ನಿರ್ದೇಶಕ ಪ್ರೊ.ಎಂ.ಶಾಂತಾರಾಮ ಶೆಟ್ಟಿ, ಡಾ.ವರುಣ್ ಶೆಟ್ಟಿ, ಡಾ.ಶ್ರೀದೀಶ್ ನಂಬಿಯಾರ್ ಹಾಗೂ ಟಿಶ್ಯೂ ಬ್ಯಾಂಕ್ ತಂಡದವರು ಸಹಕರಿಸಿದ್ದರು. ಮೃತದೇಹದಿಂದ ತೆಗೆಯಲಾದ ಮೂಳೆಗಳನ್ನು ಸಂರಕ್ಷಿಸಲಾಗಿದ್ದು ಮೂಳೆಗಳ ಸ್ಥಳದಲ್ಲಿ ಪ್ಲಾಸ್ಟಿಕ್ ಬದಲಿ ಮೂಳೆಗಳನ್ನು ಅಳವಡಿಸಲಾಗಿದೆ.

ಈ ದಾನದಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಪೀಡಿತ ಆರು ಮಕ್ಕಳ ಕೈಕಾಲುಗಳನ್ನು ಸಮರ್ಥವಾಗಿ ಉಳಿಸಬಹುದು ಎಂದು ಡಾ.ವರುಣ್ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net