

ಕಾರವಾರ:ಕೆನರಾ ಅರಣ್ಯ ವೃತ್ತದಲ್ಲಿ ಮೊದಲ ಬಾರಿಗೆ ಪಕ್ಷಿ ಗಣಪತಿ ಪ್ರಾರಂಭಿಸಲಾಗಿದೆ. ಗುರುವಾರ ಪಕ್ಷಿ ಗಣತಿಗೆ ಚಾಲನೆ ದೊರಕಿದ್ದು, ಫೆ.16 ರ ಸಾಯಂಕಾಲದವರೆಗೂ ನಡೆಯಲಿದೆ. ದೇಶದ ವಿವಿಧ ಭಾಗಗಳಿಂದ 60 ಪಕ್ಷಿ ತಜ್ಞರು ಜಿಲ್ಲೆಗೆ ಆಗಮಿಸಿದ್ದಾರೆ. ಒಟ್ಟು 30 ಮೂಲ ಕ್ಯಾಂಪ್ ಮಾಡಿಕೊಂಡು ಅಲ್ಲಿಂದ 60 ಮಾರ್ಗಗಳನ್ನು ಗುರುತಿಸಿಕೊಂಡು, ಕಾಡು, ಹಳ್ಳಿಗಳನ್ನು ಪಕ್ಷಿ ತಜ್ಞರು ಓಡಾಡಲಿದ್ದಾರೆ. ಕಾಣಿಸುವ ಪಕ್ಷಿಗಳನ್ನು ಫೋಟೋ ಹೊಡೆಯಲಿದ್ದು, ನಂತರ ಅವುಗಳನ್ನು ಗುರುತು ಹಾಕಲಿದ್ದಾರೆ.
ಪಶ್ಚಿಮಘಟ್ಟ ಹಲವು ಅಪರೂಪದ ಪ್ರಭೇದದ ಪಕ್ಷಿಗಳ ಆವಾಸ ಸ್ಥಾನ ಎಂಬುದು ವಿವಿಧ ಪುಸ್ತಕಗಳಲ್ಲಿ ದಾಖಲಾಗಿದೆ. ಕರಾವಳಿ ಮಲೆನಾಡಿಗೆ ಹಲವು ಪಕ್ಷಿಗಳು ವಲಸೆ ಬರುತ್ತವೆ ಎಂಬುದು ಅಲ್ಲಲ್ಲಿ ದಾಖಲೆಗಳಿವೆ. ಆದರೆ, ಅವೆಲ್ಲ ವೈಯಕ್ತಿಕ ಪಕ್ಷಿ ತಜ್ಞರು ಓಡಾಡಿ ಮಾಡಿದ ದಾಖಲೆಗಳಾಗಿವೆ. ಅರಣ್ಯ ಇಲಾಖೆಯಲ್ಲಿ ಇವುಗಳ ಯಾವುದೇ ದಾಖಲೆ ಇಲ್ಲ. ಅರಣ್ಯ ಇಲಾಖೆ ಇದುವರೆಗೂ ಪಕ್ಷಿ ಗಣತಿಯನ್ನೇ ನಡೆಸಿರಲಿಲ್ಲ. ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಽಕಾರಿ ವಸಂತ ರೆಡ್ಡಿ ಅವರ ಆಸಕ್ತಿ ತೋರಿ ಪಕ್ಷಿ ಗಣತಿ ಕೈಗೊಂಡಿದ್ದಾರೆ.
ಈ ಹಿಂದೆ ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಹಲವು ವರ್ಷಗಳಿಂದ ಕೈಗಾ ಸುತ್ತ ಪಕ್ಷಿ ಗಣತಿ ನಡೆಸಲಾಗುತ್ತಿದೆ. ಇನ್ನು ಕೈಗಾ ಬರ್ಡ್ರ್ಸ್ ಎಂಬ ಸಂಘಟನೆ ಕಾರವಾರ ಹಾಗೂ ಯಲ್ಲಾಪುರ ತಾಲೂಕಿ ವಿವಿಧೆಡೆ ಮಕ್ಕಳಿಗೆ ಪಕ್ಷಿಗಳ ಗುರುತಿಸುವ ಬಗ್ಗೆ ತರಬೇತಿ ನೀಡುತ್ತಿವೆ. ಆದರೆ, ಅರಣ್ಯ ಇಲಾಖೆ ಇದೇ ಮೊದಲ ಬಾರಿಗೆ ಹುಲಿ ಗಣತಿ, ಆನೆ ಗಣತಿ ನಡೆಸಿದಂತೆ ಪಕ್ಷಿ ಗಣತಿಯನ್ನೂ ಕೈಗೊಂಡಿದೆ.