

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜಪ, ತಪ, ಧ್ಯಾನ, ಮಂತ್ರಪಠಣದಲ್ಲಿ ಅಪಾರ ಶಕ್ತಿ ಇದ್ದು, ಭಕ್ತಿಯ ಶಕ್ತಿಯಿಂದ ಮನೆ ಮಂದಿರವಾಗುತ್ತದೆ. ಗೃಹಾಲಯವೇ ಜಿನಾಲಯವಾಗುತ್ತದೆ ಎಂದು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬೈಪಾಡಿಯಲ್ಲಿರುವ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಪ್ರಥಮ ವಾರ್ಷಿಕೋತ್ಸವ ಸಂದರ್ಭ ಆಯೋಜಿಸಿದ ಶಾಂತಿಚಕ್ರ ಆರಾಧನೆಯಲ್ಲಿ ಮಂಗಲ ಪ್ರವಚನ ನೀಡುತ್ತಾ ಕುಟುಂಬ, ಮನೆಯ ನಿರ್ವಹಣೆಯಲ್ಲಿ ಗೃಹಿಣಿಯ ಪಾತ್ರ ಮುಖ್ಯವಾಗಿದೆ. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು. ಹಗಲಿನ ಕೆಲಸ ಮುಗಿಸಿದ ಬಳಿಕ ಮನೆಯಲ್ಲಿ ಎಲ್ಲರೂ ಜಪ, ತಪ, ಧ್ಯಾನದಲ್ಲಿ ನಿರತರಾಗಿ ಆತ್ಮಕಲ್ಯಾಣ ಮಾಡಿಕೊಳ್ಳಬೇಕು. ಧರ್ಮದ ಮರ್ಮವನ್ನರಿತು ಜೀವನದಲ್ಲಿ ಪಾಲನೆ ಮಾಡಬೇಕು. ಉತ್ತರ ಭಾರತದಲ್ಲಿ ತೀಥರ್ಂಕರರು ಧರ್ಮ ಪ್ರಭಾವನೆ ಮಾಡಿದರೆ, ದಕ್ಷಿಣಭಾರತದಲ್ಲಿ ಆಚಾರ್ಯರು, ಮುನಿಗಳು ಧರ್ಮಪ್ರಭಾವನೆ ಮಾಡಿದ್ದಾರೆ. ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರ ಕಡೆಗಣಿಸಬಾರದು ಎಂದರು.
ತೋರಣ ಮುಹೂರ್ತ, ವಿಮಾನಶುದ್ಧಿ, ಭಗವಾನ್ ಶಾಂತಿನಾಥ ಸ್ವಾಮಿಗೆ 24 ಕಲಶಾಭಿಷೇಕ, ಪೂಜೆ, ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ, ಲಕ್ಷ ಹೂವಿನ ಪೂಜೆ. ನವಕಲಶ ಅಭಿಷೇಕ ಕ್ಷೇತ್ರಪಾಲ ಪೂಜೆ ಮೊದಲಾದ ಧಾರ್ಮಿಕ ವಿಧಿ-ವಿಧಾನ ನಡೆಯಿತು. ಬೆಳ್ತಂಗಡಿ ಬಸದಿ ಪ್ರಧಾನ ಅರ್ಚಕ ಪ್ರತಿಷ್ಠಾಚಾರ್ಯ ಕೆ.ಜಯರಾಜ ಇಂದ್ರರ ನೇತೃತ್ವದಲ್ಲಿ ಬೈಪಾಡಿ ಬಸದಿ ಜೀವಿತ್ಕುಮಾರ್ ಇಂದ್ರ, ಪುಷ್ಪರಾಜ ಇಂದ್ರ, ಹರ್ಷಿತ್ಕುಮಾರ್ ಇಂದ್ರ, ಸುದರ್ಶನ ಇಂದ್ರ, ಧರಣೇಂದ್ರ ಇಂದ್ರರು ಪೂಜೆ, ಶಾಂತಿಚಕ್ರ ಆರಾಧನೆ ನೆರವೇರಿಸಿದರು.