ಜೀವ ಉಳಿಸಲು ಪ್ರಥಮ ಚಿಕಿತ್ಸೆ ಪರಿಣಾಮಕಾರಿ

CTD 27 PRATAMmmmmmmmmmmm
Published on

ಚಿತ್ರದುರ್ಗ: ಅಪಘಾತ,ಪ್ರಕೃತಿ ವಿಕೋಪ,ಹಾನಿ ಸೇರಿದಂತೆ ಆಪತ್ಕಾಲದಲ್ಲಿ ಸ್ಪಂದನೆ ತೋರುವುದು ಮಹತ್ವದ್ದಾಗಿದೆ. ತೊಂದರೆಯಲ್ಲಿ ಸಿಲುಕಿದ ವ್ಯಕ್ತಿಗಳಿಗೆ ಸೂಕ್ತ ಪ್ರಥಮ ಚಿಕಿತ್ಸೆ ನೀಡಿದರೆ,ಅದು ಜೀವ ಉಳಿಸಲು ಪರಿಣಾಮಕಾರಿಯಾಗುತ್ತದೆ ಎಂದು ಎಸ್‌ಪಿ ಕೆ.ಪರುಶುರಾಮ್ ಹೇಳಿದರು.

ಜಿಲ್ಲಾಸ್ಪತ್ರೆ ಆವರಣದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಗುರುವಾರ ವಿವಿಧ ಇಲಾಖೆ ಸಿಬ್ಬಂದಿಗೆ ಆಯೋಜಿಸಿರುವ 3 ದಿನಗಳ ಕೌಶಲ ಆಧಾರಿತ ಪ್ರಥಮ ಪ್ರತಿಕ್ರಿಯೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಆಪತ್ಕಾಲದಲ್ಲಿ ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಸ್ಪಂದಿಸಬೇಕೆಂಬ ತಿಳಿವಳಿಕೆ ಸರಿಯಲ್ಲ.

ಸ್ಥಳದಲ್ಲಿ ಇರುವ ಯಾವುದೇ ವ್ಯಕ್ತಿ ಪ್ರಥಮ ಚಿಕಿತ್ಸೆ ನೀಡ ಬಹುದು. ಈ ಕುರಿತು ತರಬೇತಿ ಇದ್ದರೆ ಚಿಕಿತ್ಸೆ ಫಲಪ್ರದವಾಗುತ್ತದೆ. ಅಪಘಾತದಲ್ಲಿ ಜೀವ ಉಳಿಸಿದರೆ ಆತ್ಮ ಸಂತೃಪ್ತಿ ದೊರೆಯುತ್ತದೆ,ಆಪತ್ಪಾಂದವರೇ ದೇವರಾಗುತ್ತಾರೆ. ಪೊಲೀಸ್,ಅಗ್ನಿಶಾಮಕ,ಬೆಸ್ಕಾಂ,ಸಾರಿಗೆ ಇಲಾಖೆಗಳು ಹಾಗೂ ಗೃಹ ರಕ್ಷಕ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ಕುರಿತ ತರಬೇತಿ ಅಗತ್ಯವಿದ್ದು,ಆರೋಗ್ಯ ಇಲಾಖೆಯಿಂದಲೇ ತರಬೇತಿ ಆಯೋಜಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.

ಡಿಎಚ್‌ಒ ಡಾ.ಆರ್.ರಂಗನಾಥ್ ಮಾತನಾಡಿ,ಈ ತರಬೇಯಿಂದ ವಿವಿಧ ಇಲಾಖೆಗಳ ಸಿಬ್ಬಂದಿ ಆರೋಗ್ಯ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ‌್ಯ ನಿರ್ವಹಿಸಲು ಅನುಕೂಲವಾಗುತ್ತದೆ ಎಂದರು. ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ ತರಬೇತಿ ಕಾರ‌್ಯಕ್ರಮ ರೂಪಿಸಲಾಗಿದೆ. ಪ್ರಥಮ ಚಿಕಿತ್ಸೆಯಿಂದ ಶೇ.50 ಸಾವು ಸಂಭವಿಸುವುದನ್ನು ತಪ್ಪಿಸಬಹುದೆಂದರು. ಮುಂದಿನ ದಿನಗಳಲ್ಲಿ ಸ್ವಯಂ ಪ್ರೇರಿತವಾಗಿ ಆಗಮಿಸುವ ಸಾರ್ವಜನಿಕರಿಗೂ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಲಾಗುವುದು ಎಂದರು.

ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲ ಎಸ್.ಬಿ.ರವೀಂದ್ರ ಮಾತನಾಡಿ,ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ತುರ್ತು ಸೇವೆಗಳನ್ನು ಆರಂಭಿಸಲಾಗಿದೆ ಎಂದರು. ಗೃಹ ರಕ್ಷಕ ದಳ ಜಿಲ್ಲಾ ಕಮಾಂಡೆಡ್ ಸಿ.ಕೆ.ಸಂಧ್ಯಾ, ಸಂಪನ್ಮೂಲ ವ್ಯಕ್ತಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net