ಪ್ರಥಮ ಚಿಕಿತ್ಸೆ ಜೀವ ಉಳಿಸುವ ಸಾಧನ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಭಿಮತ

First aid campaign Mandya
Published on

ಕೆ.ಎಂ.ದೊಡ್ಡಿ: ಪ್ರಥಮ ಚಿಕಿತ್ಸೆಯು ಜೀವ ಉಳಿಸುವ ಸಾಧನ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ಇಲ್ಲಿನ ಪದ್ಮಾ ಜಿ.ಮಾದೇಗೌಡ ನರ್ಸಿಂಗ್ ಕಾಲೇಜು ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ಪ್ರಥಮ ಚಿಕಿತ್ಸಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೈದ್ಯರಲ್ಲದಿದ್ದರೂ ವೈದ್ಯಕೀಯ ಹಿನ್ನೆಲೆ ಇಲ್ಲದಿದ್ದರೂ ಸಹ ಯಾರಾದರೂ ಇದನ್ನು ಕಲಿಯಬಹುದು. ಪ್ರತಿಯೊಬ್ಬರೂ ಈ ಅಗತ್ಯ ಪ್ರಥಮ ಚಿಕಿತ್ಸಾ ಸೌಲಭ್ಯ ಕಲಿಯಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಜೀವ ಉಳಿಸುವ ವಿಧಾನಗಳ ಕೌಶಲವನ್ನು ಕಲಿಯಬೇಕು ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ನಿರ್ದೇಶಕ ಕೆ.ಟಿ.ಹನುಮಂತು ಮಾತನಾಡಿ, ಅಪಘಾತಕ್ಕೆ ಒಳಗಾಗಿದವರನ್ನು ವೈದ್ಯರ ಸೇವೆ ದೊರಕುವರೆಗೆ ಪ್ರಾಣಾಪಾಯದಿಂದ ರಕ್ಷಿಸಲು ನೀಡುವ ಪೂರಕ ಚಿಕಿತ್ಸೆಯನ್ನು ಪ್ರಥಮ ಚಿಕಿತ್ಸೆ ಎನ್ನುತ್ತಾರೆ. ಪ್ರಥಮ ಚಿಕಿತ್ಸೆಯ ಪಿತಾಮಹ ಎಸ್ಮಾರ್ಕ್, ಇವರ ಸೇವೆ ಅನನ್ಯ. ಪ್ರಥಮ ಚಿಕಿತ್ಸೆಯನ್ನು ಮೊದಲ ಬಾರಿಗೆ 1879ರಲ್ಲಿ ಇಂಗ್ಲೆಂಡಿನ ಸೆಂಟ್‌ಜಾನ್ಸ್ ಆಂಬ್ಯುಲೆನ್ಸ್ ಸಂಘದಿಂದ ಜಾರಿಗೆ ತಂದರು. ಇದರ ಮುಖ್ಯ ಗುರಿ ಜೀವಗಳನ್ನು ಉಳಿಸುವುದು ಮತ್ತು ಸಾವಿನ ಅಪಾಯ ಕಡಿಮೆ ಮಾಡುವುದಾಗಿದೆ ಎಂದು ಹೇಳಿದರು.

ಪ್ರಥಮ ಚಿಕಿತ್ಸೆಯಲ್ಲಿ ತರಬೇತಿ ಪಡೆಯುವುದರಿಂದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಕೌಶಲ ಮತ್ತು ಧೈರ್ಯ ಹೆಚ್ಚಾಗುತ್ತದೆ. ಆತ್ಮವಿಶ್ವಾಸ ಮತ್ತು ಕೌಶಲ ಜ್ಞಾನದಿಂದ ಜೀವವನ್ನು ಉಳಿಸಬಹುದು. ಹಾಗಾಗಿ ಪ್ರಥಮ ಚಿಕಿತ್ಸಾ ಅಭಿಯಾನದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹೇಶ್‌ಕುಮಾರ್, ಸಂಪನ್ಮೂಲ ವ್ಯಕ್ತಿ ಡಾ.ಕೆ.ಪಿ.ನಾಗರಾಜು, ರೆಡ್‌ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net