ಭೀಮಾ ತೀರದಲ್ಲಿ ಗುಂಡಿನ ದಾಳಿ - ರೌಡಿಶೀಟರ್ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ

Rowdy Sheeter Ashok
ರೌಡಿಶೀಟರ್ ಅಶೋಕ ಮಲ್ಲಪ್ಪ ಗಂಟಗಲ್ಲಿ
Published on

ಚಡಚಣ: ಪಟ್ಟಣದ ನೀವರಗಿ ರಸ್ತೆ ಬಳಿ ಅಪರಿಚಿತ ದುಷ್ಕರ್ಮಿಗಳು ಹಾಡಹಗಲೆ ಗುಂಡಿನ ದಾಳಿ ನಡೆಸಿ ರೌಡಿಶೀಟರ್ ನೊಬ್ಬನನ್ನು ಹತ್ಯೆಮಾಡಿ ಪರಾರಿಯಾದ ಘಟನೆ ಭಾನುವಾರ ನಡೆದಿದೆ.

ಅಪರಾಧಿಯಾಗಿ ಇತ್ತೀಚೆಗಷ್ಟೆ ಪೆರೋಲ್ ಮೇಲೆ ಬಂದಿದ್ದ ಅಶೋಕ ಮಲ್ಲಪ್ಪ ಗಂಟಗಲ್ಲಿ ಎಂಬ ರೌಡಿಶೀಟರ್ ಹತ್ಯೆಗೀಡಾದ ದುರ್ದೈವಿ. ಹಳೆ ದ್ವೇಷವೇ ಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅಶೋಕ ತನ್ನ ಮನೆಯಿಂದ ಪಟ್ಟಣಕ್ಕೆ ಬರುತ್ತಿದ್ದ ವೇಳೆ ಆತನ ಹಿಂದಿನಿಂದ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆತನ ಬೆನ್ನಿಗೆ ಮೂರಕ್ಕೂ ಅಧಿಕ ಗುಂಡುಗಳು ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೊಲೆ ಹಾಗೂ ಇತರ ಅಪರಾಧ ಪ್ರಕರಣಗಳಲ್ಲಿ ವಿಜಯಪುರದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಶೋಕ ಪೆರೋಲ್ ಮೇಲೆ ಹೊರಗೆ ಬಂದಿದ್ದ ಎಂದು ತಿಳಿದು ಬಂದಿದೆ. ಅಶೋಕ ಮೇಲಿನ ಹಳೆ ದ್ವೇಷದಿಂದ ಹಂತಕರು ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.

ಕೊಲೆಗೀಡಾದ ಅಶೋಕನ ಪತ್ನಿ ಚಡಚಣ ಪಟ್ಟಣದ ವಾರ್ಡ್ ನಂಬರ್ 2 ರ ಬಿಜೆಪಿ ಸದಸ್ಯೆಯಾಗಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹತ್ಯೆಗೀಡಾದ ಸ್ಥಳಕ್ಕೆ ಚಡಚಣ ಪೊಲೀಸರು ದೌಡಾಯಿಸಿ, ತನಿಖೆ ನಡೆಸಿ, ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net